ನವದೆಹಲಿ: ಜಾಗತಿಕ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆ! 2026ರ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪೋರ್ಟೊ ರಿಕೊ ದೇಶದ ಜೆನ್ನಿಫರ್ ಬ್ಯಾರೆಟೊ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮಿಸ್ ಯೂನಿವರ್ಸ್ ಪಟ್ಟ ಗೆದ್ದ ಮೊದಲ ತಾಯಿ ಎಂಬ ಹೆಗ್ಗಳಿಕೆಗೆ 27 ವರ್ಷದ ಜೆನ್ನಿಫರ್ ಪಾತ್ರರಾಗಿದ್ದಾರೆ.
ಅಂತಿಮ ಸುತ್ತಿನ ಭರ್ಜರಿ ಪೈಪೋಟಿಯಲ್ಲಿ ಡೊಮಿನಿಕನ್ ರಿಪಬ್ಲಿಕ್ ಸುಂದರಿ ಮೊದಲ ರನ್ನರ್-ಅಪ್ ಆದ್ರೆ, ವೆನೆಜುವೆಲಾ ಸುಂದರಿ ಎರಡನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ್ರು. ಇನ್ನು ಫಿಲಿಪೈನ್ಸ್ ಮತ್ತು ನ್ಯೂಜಿಲೆಂಡ್ ದೇಶದ ಸ್ಪರ್ಧಿಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಫಲಿತಾಂಶ ಹೊರಬಿದ್ದ ತಕ್ಷಣ ಮಿಸ್ ಯೂನಿವರ್ಸ್ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸಂಭ್ರಮದ ವಿಡಿಯೋ ಶೇರ್ ಮಾಡಲಾಗಿದ್ದು, ಹೊಸ ರಾಣಿ, ಹೊಸ ಯುಗ! ಪೋರ್ಟೊ ರಿಕೊಗೆ ಕಿರೀಟ ತಂದುಕೊಟ್ಟ ನಮ್ಮ ಹೊಸ ಮಿಸ್ ಯೂನಿವರ್ಸ್ ಜೆನ್ನಿಫರ್ ಬ್ಯಾರೆಟೊ ಅವರಿಗೆ ಅಭಿನಂದನೆಗಳು ಅಂತ ಬರೆದುಕೊಳ್ಳಲಾಗಿದೆ.
ಅಷ್ಟೇ ಅಲ್ಲದೇ ಹೋಲಾ ಮ್ಯಾಗಜೀನ್ ವರದಿ ಪ್ರಕಾರ, ಜೆನ್ನಿಫರ್ ಅವರು ಅಮೆರಿಕದ ರಕ್ಷಣಾ ಇಲಾಖೆಯ ಸೇನಾ ವಿಭಾಗದಲ್ಲಿ ಪ್ರಿವೆನ್ಷನ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡ್ತಿದ್ದಾರೆ. ಸಮಾಜದಲ್ಲಿ ಕೆಟ್ಟ ಅಭ್ಯಾಸಗಳು ಮತ್ತು ಹಾನಿಕಾರಕ ನಡವಳಿಕೆಗಳನ್ನು ತಡೆಗಟ್ಟಿ, ಒಳ್ಳೆಯ ಮತ್ತು ಆರೋಗ್ಯಕರ ಸಮಾಜ ಕಟ್ಟುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸೋದೇ ಇವರ ಮುಖ್ಯ ಕೆಲಸ.

ವಾಲಿಬಾಲ್ ಆಟ ಮತ್ತು ಸಮಾಜ ಸೇವೆ: ಕೆಲಸ ಮತ್ತು ಮಗಳ ಜವಾಬ್ದಾರಿಗಳ ನಡುವೆಯೂ ಜೆನ್ನಿಫರ್ ತಮ್ಮಿಷ್ಟದ ಹವ್ಯಾಸಗಳಿಗೆ ಟೈಮ್ ಕೊಡ್ತಾರೆ. ಅವರಿಗೆ ಪುಸ್ತಕ ಓದೋದು ಮತ್ತು ವಾಲಿಬಾಲ್ ಆಡೋದು ಅಂದ್ರೆ ತುಂಬಾ ಇಷ್ಟ. ಇದರ ಜೊತೆಗೆ ಪೋರ್ಟೊ ರಿಕೊದಾದ್ಯಂತ ಅನೇಕ ಸಮಾಜ ಸೇವಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜೆನ್ನಿಫರ್ ಅವರು ‘ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್ ಆಫ್ ಪೋರ್ಟೊ ರಿಕೊ’ ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮಧುಮೇಹಕ್ಕೆ ತುತ್ತಾದ ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯ ತುಂಬೋದು, ಜೊತೆಗೆ ಈ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇವರು ಮಾಡ್ತಿದ್ದಾರೆ.
ಸಾಮಾನ್ಯವಾಗಿ ಅನೇಕರು ಸೌಂದರ್ಯ ಸ್ಪರ್ಧೆಗಳನ್ನು ಸಿನಿಮಾ ಅಥವಾ ಮಾಡೆಲಿಂಗ್ ಜಗತ್ತಿಗೆ ಎಂಟ್ರಿ ಕೊಡುವ ಮೆಟ್ಟಿಲು ಅಂತ ನೋಡ್ತಾರೆ. ಆದ್ರೆ ಜೆನ್ನಿಫರ್ ಹಾಗಲ್ಲ. ತಮ್ಮ ಸಮಾಜ ಸೇವಾ ಕೆಲಸಗಳನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸಲು ಮತ್ತು ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು ‘ಮಿಸ್ ಯೂನಿವರ್ಸ್’ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಒಬ್ಬ ತಾಯಿಯಾಗಿ, ವೃತ್ತಿಪರ ಮಹಿಳೆಯಾಗಿ ಮತ್ತು ಈಗ ವಿಶ್ವ ಸುಂದರಿಯಾಗಿ ಗೆದ್ದು ಬೀಗಿರುವ ಜೆನ್ನಿಫರ್ ಬ್ಯಾರೆಟೊ, ಇಡೀ ಜಗತ್ತಿನ ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.






Discussion about this post