ಮಂಗಳೂರು, ಮಾ.27: ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ 2024ನೆ ಸಾಲಿನ ಲೋಕಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ಮಾ. 28ರಿಂದ ಎ. 4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿ ನೀಡಿದ ಅವರು, ಮಾ. 29 ಹಾಗೂ 31ರಂದು ಸರಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೆ ಮಹಡಿಯ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ (ಆರ್‌ಒ) ಅಥವಾ ಎಆರ್‌ಒ (ಅಪರ ಜಿಲ್ಲಾಧಿಕಾರಿ) ಗೆ ನಾಮಪತ್ರ ಸಲ್ಲಿಸಬಹುದು ಎಂದರು.
ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸಪರ್ಧಿಸುತ್ತಿದ್ದರೆ, ಕ್ಷೇತ್ರದ 10 ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು. ನಾಮಪತ್ರ ಸಲ್ಲಿಕೆಯ ಸಂದರ್ಭ ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯೊಳಗೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಆರ್‌ಒ ಕೊಠಡಿಗೆ ಅಭ್ಯರ್ಥಿ ಸೇರಿ ಐದು ಮಂದಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬಹುದು. ನಾಮಪತ್ರದ ಜತೆ ಅಭ್ಯರ್ಥಿ ಫಾರಂ 26ರಲ್ಲಿ ತನ್ನ ವೈಯಕ್ತಿಕ ವಿವರವನ್ನು ಅಫಿದವಿತ್‌ನೊಂದಿಗೆ ಒದಗಿಸಬೇಕು. ಯಾವುದೇ ಕಾಲಂ ಖಾಲಿ ಬಿಡುವಂತಿಲ್ಲ. ಜತೆಗೆ ಯಾವುದೇ ಸರಕಾರಿ ಲೆಕ್ಕಶೀರ್ಷಿಕೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನು ನೀಡಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಸಮಯದಿಂದೇ ಆತನ ಚುನಾವಣಾ ಖರ್ಚು ವೆಚ್ಚಗಳು ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಕ್ ಖಾತೆಯ ಮೂಲಕ ಎಲ್ಲಾ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ದಾಖಲೆ ಏನು ಬೇಕು: ಸಂಪೂರ್ಣವಾಗಿ ಭರ್ತಿ ಮಾಡಿದ ನಾಮಪತ್ರ, ಅಫಿದಾವಿತ್ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿರಬೇಕು, ದೃಢೀಕರಣ ಪತ್ರ, ಪ್ರತಿಜ್ಞಾ ವಿಧಿ (ವೋಥ್ ಆಫ್ ಅಫಾರ್ ಮೇಶನ್), ನಮೂನೆ -26 ರಲ್ಲಿ 8ii (b) ಪ್ರಕರಣದಲ್ಲಿ ನೋಡ್ಯೂ ಪ್ರಮಾಣಪತ್ರ, 4 ಭಾವಚಿತ್ರಗಳು (ಹಿಂಭಾಗ ಬಿಳಿಯ ಬಣ್ಣವಿರಬೇಕು)
ಮಾದರಿ ಸಹಿ, ಮತಪತ್ರದಲ್ಲಿ ಮುದ್ರಿಸಬೇಕಾಗಿರುವ ಮಾದರಿ ಹೆಸರಿನ ವಿವರ ಮತ್ತು ಚಿಹ್ನೆ, ನೇಮಕ ಮಾಡಲಾಗುವ ಚುನಾವಣಾ ಏಜೆಂಟ್ ವಿವರಗಳು,ಫೋಟೋ ಮತ್ತು ಮತದಾರರ ಗುರುತಿನ ಚೀಟಿಯನ್ನು ಫಾರಂ 8 ರಲ್ಲಿ ತುಂಬಿರಬೇಕು. ನೂತನ ಬ್ಯಾಂಕ್ ಖಾತೆ ಹಾಗೂ ಅದರ ಪಾಸ್ ಪುಸ್ತಕದ ಪ್ರತಿ, ಪಾನ್ ಕಾರ್ಡ್, ಅಧೀಕೃತ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ, ಸಾಮಾನ್ಯ ಅಭ್ಯರ್ಥಿಗೆ 25,000 ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಯವರಿಗೆ 12,500 ರೂ. ಹಾಗೂ ಜಾತಿ ಪ್ರಮಾಣ ಪತ್ರ, ವೆಬ್‍ಸೈಟ್ ವಿಳಾಸ, ಅನುಬಂಧ 49 ರಲ್ಲಿ ಚುನಾವಣಾ ವೆಚ್ಚದ ನಿರ್ವಹಣೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post