ಬೆಂಗಳೂರು, ಆಗಸ್ಟ್.26: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಜೈಲಿನ ಅವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಆತನ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ ದರ್ಶನ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎನ್ನಲಾಗಿದೆ. ಕಾರಾಗೃಹಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸಿಎಂ ಸೂಚನೆ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿದ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಅವರು ಇಬ್ಬರು ಜೈಲರ್‌ಗಳು ಸೇರಿದಂತೆ ಒಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಈಮಧ್ಯೆ, ವಿಚಾರ ಬಹಿರಂಗವಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಗೃಹಸಚಿವ ಡಾ. ಪರಮೇಶ್ವರ್ ಭೇಟಿ ನೀಡಿದರು. ಜೈಲಿನಲ್ಲಿ ಅಕ್ರಮ ನಡೆದಿರೋದು ನಮಗೆ ತಿಳಿದಿದೆ. ಅಧೀಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಶೇಷಮೂರ್ತಿಯಿಂದ ಲೋಪವಾಗಿದೆ. ಈ ಇಬ್ಬರು ಜೈಲು ಅಧಿಕಾರಿಗಳನ್ನೂ ಸಹ ಅಮಾನತು ಮಾಡಿದ್ದೇವೆ ಎಂದು ತಿಳಿಸಿದರು.
ದರ್ಶನ್ ವಿರುದ್ಧ ಮತ್ತೆ ಎಫ್ಐಆರ್ : ‘ಕಾರಾಗೃಹ U/s. 42 ಆ್ಯಕ್ಟ್’ ಅಡಿಯಲ್ಲಿ ಒಂದು ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ ದರ್ಶನ್ A1, ಮ್ಯಾನೇಜರ್ ನಾಗರಾಜ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳ ಸೀನಾ A4 ಆಗಿದ್ದಾನೆ. ಇನ್ನೊಂದು ಎಫ್ಐಆರ್ನಲ್ಲಿ ದರ್ಶನ್ A1, ಧರ್ಮ A2 ಹಾಗೂ ಸತ್ಯ A3 ಆಗಿದ್ದಾನೆ. ‘U/S 42, 54 (1(A) Prisons Act & 238, 323 BNS’ ಅಡಿಯಲ್ಲಿ ಸುದರ್ಶನ್ ಕೆ.ಎಸ್. A1, ಮುಜೀಬ್ A2, ಪರಮೇಶ ನಾಯಕ್ ಲಮಾಣಿ A3, ಕೆ.ಬಿ. ರಾಯಮನೆ A4 ಆಗಿರುವುದು ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post