ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗಾಗಿ ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಸರ್ವೆ ನಡೆಸಬೇಕು. ಅಗತ್ಯ ಬಿದ್ದರೆ ಅಂತಹ ವಿದೇಶಿಗರನ್ನು ಬಂಧಿಸುವಂತೆಯೂ ಸೂಚನೆ ನೀಡಿದ್ದೇನೆ’ ಎಂದು ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಡಿವೈಎಸ್‌ಪಿಗಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಅವರು ಇಲ್ಲಿನ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನೂ ಮಾಡಿಸಿಕೊಂಡಿದ್ದರು. ಇಲ್ಲೂ ವಿಸಾ ಅವಧಿ ಮುಗಿದ ಬಳಿಕವು ನೆಲೆಸಿರುವವರು ಹಾಗೂ ಅಕ್ರಮವಾಗಿ ದೇಶದೊಳಗೆ ನುಸುಳಿರುವವರ ಮೇಲೆ ಕಣ್ಣಿಡಬೇಕಾಗಿದೆ’ ಎಂದರು. ‘ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಯಾವ ದೇಶದವರು, ಅವರ ಚಟುವಟಿಕೆಗಳೇನು ಎಂಬ ಬಗ್ಗೆಯೂ ಕಣ್ಣಿಡಬೇಕು. ಈ ವಿವರಗಳನ್ನು ಪ್ರತಿ ಠಾಣೆಯಲ್ಲಿ ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ. ಎರಡು ವಾರಗಳಲ್ಲಿ ಈ ಸರ್ವೆ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ’ ಎಂದರು.
‘ರಾಜ್ಯದಲ್ಲಿ ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಇಲ್ಲೂ ಸ್ವಂತ ಜಾಗ ಹೊಂದಿರುವ ಕಡೆ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯಕ್ಕೆ ಪೊಲೀಸ್ ಠಾಣೆ ಕಟ್ಟಡ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದರು. ‘ಉಪಗ್ರಹ ಫೋನ್ ಬಳಕೆ ಪ್ರಕರಣಗಳ ತನಿಖೆಯನ್ನೂ ಕೂಲಂಕಷವಾಗಿ ನಡೆಸಲಾಗುತ್ತಿದೆ. ಕೆಲವೊಮ್ಮೆ ಸಮುದ್ರದ ನಡುವೆ ಉಪಗ್ರಹ ಪೋನ್ ಬಳಸಿದರೆ ಅಕ್ಷಾಂಶ ಮತ್ತು ರೇಖಾಂಶಗಳ ನಿಖರ ವಿವರಗಳು ಸಿಗುವುದಿಲ್ಲ. ಆಂತರಿಕ ಭದ್ರತೆಗೆ ಸಂಬಂಧಿಸಿದ ಕಣ್ಗಾವಲನ್ನು ಹೆಚ್ಚಿಸಿದ್ದೇವೆ. ಶಾಂತಿ ಮತ್ತು ಭದ್ರತೆ ಕಾಪಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಕ್ತಿಮೀರಿ ಕೆಲಸ ಮಾಡುತ್ತಿವೆ’ ಎಂದು ಗೃಹಸಚಿವರು ತಿಳಿಸಿದರು.