ಮಂಗಳೂರು, ಆಗಸ್ಟ್ 28: ಈಗಿನ ಕೆಲವು ಯುವಕ- ಯುವತಿಯರಿಗೆ ಟಿಕ್ ಟಾಕ್ ವಿಡಿಯೋ ಮಾಡುವುದು ಟ್ರೆಂಡ್ ಆಗಿದೆ. ಆದರೆ, ಎಲ್ಲಿ ಯಾವುದನ್ನು ಮಾಡಬೇಕು ಎಂಬ ಅರಿವು ಇಲ್ಲದೆಯೋ, ಏನಾಗುತ್ತೆ ಎಂಬ ದಾರ್ಷ್ಟ್ಯವೋ ಸಿಕ್ಕಸಿಕ್ಕಲ್ಲಿ ಟಿಕ್ ಟಾಕ್ ಮಾಡಿ ಸಿಕ್ಕಿಬೀಳುತ್ತಾರೆ. ಹಳೆಯಂಗಡಿ ಪ್ರಸಿದ್ಧ ಪಾವಂಜೆ ದೇವಸ್ಥಾನದಲ್ಲಿ ಇಬ್ಬರು ಹುಡುಗಿಯರ ಜೊತೆ ಯುವಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿದ್ದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ತನ್ನೊಂದಿಗೆ ಇಬ್ಬರು ಹುಡುಗಿಯರ ಜೊತೆ ವಿಡಿಯೋ ಮಾಡಿದ್ದಾನೆ. ದೇವಸ್ಥಾನದ ಒಳಗಿನ ಅಂಗಣದಲ್ಲಿ ವಿಡಿಯೋ ಮಾಡಿರುವಂತಿದೆ. ನಾಲ್ಕು ಮಾದರಿಯ ಬೇರೆ ಬೇರೆ ವಿಡಿಯೋಗಳು ವೈರಲ್ ಆಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಳದಲ್ಲಿ ಅರ್ಚಕರು ಪೂಜೆ ಮಾಡಿ ಹೋದ ಬಳಿಕ ಪ್ರತೀಕ್ ಶೆಟ್ಟಿ ಎಂಬ ಯುವಕ ಇಬ್ಬರು ಹುಡುಗಿಯರೊಂದಿಗೆ ದೇವಸ್ಥಾನದ ಆವರಣದಲ್ಲಿ ಪ್ರೀತಿ-ಪ್ರೇಮ ನಿವೇದನೆ ಕಾನ್ಸೆಪ್ಟ್ ಕುರಿತ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ. ಇದರಿಂದಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆ ಮೂವರ ವಿರುದ್ಧ ಆಕ್ರೋಶ ಹೊರಹಾಕಿರುವ ಭಕ್ತರು ಮತ್ತು ಗ್ರಾಮಸ್ಥರು, ಇದರಲ್ಲಿ ಭಾಗಿಯಾದವರೆಲ್ಲರೂ ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಕ್ಷಮೆಯಾಚಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post