ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗ, ರಸ್ತೆ ಪಕ್ಕದ ಮರಗಳು, ವಿದ್ಯುತ್ ಕಂಬಗಳಲ್ಲಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ದೂರಸಂಪರ್ಕ ಕೇಬಲ್‌ಗಳನ್ನು ಅಳವಡಿಸಲು ಇನ್ನು ಮುಂದೆ ಮನಪಾ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ರೀತಿ ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಲು ಈ ಹಿಂದೆ ಮೆಸ್ಕಾಂ ಅನುಮತಿ ನೀಡುತ್ತಿತ್ತು. ಅದರಂತೆ, ಆಯಾ ಸಂಸ್ಥೆಯವರು ನಿರ್ದಿಷ್ಟ ಪ್ರದೇಶದಲ್ಲಿ ಕೇಬಲ್ ಅಳವಡಿಕೆ ಮಾಡುತ್ತಿದ್ದರು. ಹೀಗಿದ್ದಾಗಲೂ ನಗರದ ಅಲ್ಲಲ್ಲಿ ಅನಧಿಕೃತವಾಗಿಯೂ ಕೇಬಲ್‌ಗಳು ಕಾಣಿಸಿಕೊಂಡಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾ ಗುತ್ತದೆ ಎಂದು ಮನಪಾ ಸಾಮಾನ್ಯ ಸಭೆಯ ಲ್ಲಿಯೂ ಸದಸ್ಯರಿಂದ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನಪಾ ಆಯುಕ್ತರು ಮೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದೀಗ ಮೆಸ್ಕಾಂನಿಂದ ಅನುಮತಿಗೆ ಪಾಲಿಕೆಯ ನಿರಾಕ್ಷೇಪಣೆ ಪತ್ರವನ್ನು ಕಡ್ಡಾಯಗೊಳಿಸಿದೆ.
ನೂತನ ನಿಯಮದಂತೆ ನಗರದಲ್ಲಿ ಕರೆಂಟ್ ಕಂಬಗಳಲ್ಲಿ ಕೇಬಲ್ ಅಳವಡಿಸಲು ಪಾಲಿಕೆಯಿಂದ ನಿರಾಕ್ಷೇಪಣೆ ಪತ್ರವನ್ನು ತರಬೇಕು. ಬಳಿಕ ಆ ಪತ್ರವನ್ನು ಮೆಸ್ಕಾಂಗೆ ಸಲ್ಲಿಸಬೇಕಾಗುತ್ತದೆ. ಅದರ ಆಧಾರದಲ್ಲಿ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಳಿಕವಷ್ಟೇ ಕೇಬಲ್ ಅಳವಡಿಸಲು ಅನುಮತಿ ನೀಡುತ್ತಾರೆ.