ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೊಟೇಕಾರ್ ಬೀರಿ ಹಾಗೂ ಕೊಣಾಜೆ ಬಂಟ್ಸ್ ಭವನದ ಬಳಿ ಮಂಗಳವಾರ ಸಂಜೆ ಮಂಗಳೂರು ನಗರ ಪೊಲೀಸರು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಿಢೀರ್ ಡ್ರಗ್ಸ್ ತಪಾಸಣೆ ಕಾರ್ಯಾಚರಣೆ ನಡೆಸಿದ್ದಾರೆ.
ಒಟ್ಟು 159 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದ್ದು, ಈ ಪೈಕಿ ಕೇವಲ ಒಬ್ಬ ವಿದ್ಯಾರ್ಥಿಯಲ್ಲಿ ಮಾತ್ರ ಡ್ರಗ್ಸ್ ಸೇವನೆ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸಂಜೆ 4:30 ರಿಂದ 6 ಗಂಟೆಯ ನಡುವೆ ಮಂಗಳೂರು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರ ಉಸ್ತುವಾರಿಯಲ್ಲಿ, ಎಸಿಪಿ ದಕ್ಷಿಣ ಹಾಗೂ ಎಸಿಪಿ ಸೆಂಟ್ರಲ್ ವಿಭಾಗಗಳಿಂದ ಈ ಮಿಂಚಿನ ಕಾರ್ಯಾಚರಣೆ ನಡೆಯಿತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಹಾಗೂ ಕಾಲೇಜು ಬಸ್‌ಗಳನ್ನು ತಡೆದು ‘ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್’ ಮೂಲಕ ತಪಾಸಣೆ ನಡೆಸಲಾಯಿತು.
ಉಳ್ಳಾಲ ವ್ಯಾಪ್ತಿ: ಎಸ್‌ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಸಂತ ಅಲೋಶಿಯಸ್, ಪಿ.ಎ. ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಈ ಪೈಕಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಆಗಿದೆ.
ಕೊಣಾಜೆ ವ್ಯಾಪ್ತಿ: ಪಿ.ಎ. ಕಾಲೇಜಿನ ಎರಡು ಬಸ್‌ಗಳನ್ನು ತಡೆದು, ಒಟ್ಟು 87 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಇಲ್ಲಿ ತಪಾಸಣೆಗೊಳಪಟ್ಟ ಎಲ್ಲಾ 87 ವಿದ್ಯಾರ್ಥಿಗಳ ವರದಿಯೂ ನೆಗೆಟಿವ್ ಬಂದಿದೆ.
ತಪಾಸಣೆಯ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, “ಒಟ್ಟು ತಪಾಸಣೆಗೊಳಪಟ್ಟ ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬನಲ್ಲಿ ಮಾತ್ರ ಡ್ರಗ್ಸ್ ಪಾಸಿಟಿವ್ ಬಂದಿದೆ. ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಪಾಸಿಟಿವ್ ಬರುವ ಪ್ರಮಾಣ ಕಡಿಮೆಯಾಗುತ್ತಿದೆ. ಆದಾಗ್ಯೂ, ಗಾಂಜಾ/ಡ್ರಗ್ಸ್ ಮುಕ್ತ ಮಾಡಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿರುವ ವಿದ್ಯಾರ್ಥಿಯ ವಿರುದ್ಧ ನಿಯಮಾನುಸಾರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಆತನನ್ನು ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು ಹಾಗೂ ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಮುಂದುವರಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post