ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮಿಜಾರು ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಕೆಸರ್‌ಡ್ ಒಂಜಿ ದಿನ -2021 ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಿತು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ರಾಜು ಗೌಡ ಅರೆಮಜಲು ಪಲ್ಕೆ ಮತ್ತು ಕೃಷಿ ಕಾರ್ಮಿಕೆ ವಾರಿಜ ಮಿಜಾರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ, ಭಾರತ ಕೃಷಿ ಪ್ರದಾನ ದೇಶ. ಕನ್ನಡ ನಾಡಿನ ಜನತೆ ಜತೆ ತುಳುನಾಡಿನ ಸಂಸ್ಕೃತಿಯೂ ಬೆರೆತು ಹೋಗಿದೆ. ಗ್ರಾಮೀಣ ಬದುಕಿನ ಸೊಬಗು ಮತ್ತು ಸೊಗಡನ್ನು ಹೊಂದಿರುವ ಈ ದೇಶ ಇಂದು ತಂತ್ರಜ್ಞಾನದ ಪ್ರಭಾವದಿಂದಾಗಿ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಳ್ವಾಸ್ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ರಾಘವೇಂದ್ರ ಪೆಜತ್ತಾಯ , ಪ್ರಗತಿಪರ ಕೃಷಿಕ ಪ್ರಕಾಶ್ ಆಳ್ವ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ , ಉಪಾಧ್ಯಕ್ಷೆ ಶಮಿತಾ ಶೆಟ್ಟಿ , ಸದಸ್ಯ ನೇಮಿರಾಜ್ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ , ಪ್ರಗತಿಪರ ಕೃಷಿಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ಮಂಜುನಾಥ್ ಎಚ್.ಆರ್ , ವಿದ್ಯಾರ್ಥಿ ಸಂಯೋಜಕಿ ಅಶ್ಮಿತಾ ಮೆಂಡನ್ , ಆಟೋಟ ಸ್ಪರ್ಧೆಗಳಿಗಾಗಿ ಗದ್ದೆಯನ್ನು ಸಮತಟ್ಟುಗೊಳಿಸಲು ಶ್ರಮಿಸಿದ ಸುಧಾಕರ ಪೂಂಜಾ ಇದ್ದರು . ವಿಭಾಗ ಮುಖ್ಯಸ್ಥ ಪ್ರೊ.ಸುಧೀರ್ ಶೆಟ್ಟಿ ಸ್ವಾಗತಿಸಿದರು. ಸಿರಿಶಾ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕಿ ಭುವನಾ ವಂದಿಸಿದರು.
ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ , ಹಗ್ಗಜಗ್ಗಾಟ , ಕಬಡ್ಡಿ , ಮೊಸರು ಕುಡಿಕೆ ಒಡೆಯುವುದು , ಓಟ , ಅಡಕೆ ಹಾಳೆಯಲ್ಲಿ ಎಳೆಯುವುದು , ಉಪ್ಪು ಮೂಟೆ ಹಾಗೂ ಮೂರು ಕಾಲಿನ ಓಟ ಮುಂತಾದ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆದವು.
Discover more from Coastal Times Kannada
Subscribe to get the latest posts sent to your email.
Discussion about this post