ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ. ಈ ವಿಷಯದಲ್ಲಿ ಜನರನ್ನು ಆತಂಕಕ್ಕೆ ತಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಕೆಲವು ದೇಶಗಳಲ್ಲಿ ಓಮಿಕ್ರಾನ್ ತಳಿಯ ಹೊಸ ಕೋವಿಡ್ ವೈರಾಣು ಪತ್ತೆಯಾಗಿದೆ. ಅದು ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಲಭಿಸಿದೆ. ಆದರೆ, ಅದೇ ಕಾರಣಕ್ಕಾಗಿ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ವದಂತಿಯನ್ನು ಸಾಮಾಜಿಕ ಮಾಧ್ಯಮಗಳು ಅಥವಾ ಮಾಧ್ಯಮಗಳಲ್ಲಿ ಬಿತ್ತರಿಸಬಾರದು ಎಂದರು.
ಕೋವಿಡ್‌ನಿಂದ ಜನರು ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಪ್ರಾಣ ಹಾನಿ, ಆರ್ಥಿಕ ನಷ್ಟ ಮತ್ತು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಜನರನ್ನು ಆತಂಕಕ್ಕೆ ಸಿಲುಕಿಸುವಂತಹ ಪ್ರಯತ್ನವನ್ನು ಮಾಡಬಾರದು ಎಂದು ಹೇಳಿದರು.
ಡೆಲ್ಟಾದಷ್ಟು ಭೀಕರವಲ್ಲ: ಓಮಿಕ್ರಾನ್ ತಳಿಯ ವೈರಾಣು ಪತ್ತೆಯಾಗಿರುವ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ವೈದ್ಯ ಸ್ನೇಹಿತರ ಜತೆ ಮಾತನಾಡಿದ್ದೇನೆ. ಅವರು ನೀಡಿದ ಮಾಹಿತಿ ಪ್ರಕಾರ, ಓಮಿಕ್ರಾನ್ ತಳಿಯ ವೈರಾಣು ಒಂಭತ್ತು ತಿಂಗಳಿಂದ ಇರುವ ಡೆಲ್ಟಾ ತಳಿಯ ವೈರಾಣುವಿನಷ್ಟು ತೀವ್ರವಾಗಿ ವರ್ತಿಸುವುದಿಲ್ಲ. ಇದು ಸೌಮ್ಯವಾಗಿ ವರ್ತಿಸುತ್ತಿರುವ ವೈರಾಣು ಎಂಬ ಮಾಹಿತಿ ಲಭಿಸಿದೆ ಎಂದು ಸುಧಾಕರ್ ತಿಳಿಸಿದರು.