ಮಂಗಳೂರು, ಡಿ.29: ಮಂಗಳೂರು ನಗರ ಮತ್ತು ಹೊರವಲಯದ ದೈವಸ್ಥಾನ, ದೇವಸ್ಥಾನ, ಮಸೀದಿ, ಸೇರಿದಂತೆ 18 ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರಗಳನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದವನಾಗಿದ್ದು ಕ್ರಿಸ್ತಿಯನ್ ಆಗಿ ಮತಾಂತರಗೊಂಡಿರುವ, ಸದ್ಯಕ್ಕೆ ಉಳ್ಳಾಲದ ಕೋಟೆಕಾರು ಬಳಿಯ ಮಿತ್ರ ನಗರದಲ್ಲಿ ವಾಸವಿರುವ ದೇವದಾಸ್ ದೇಸಾಯಿ(62) ಎಂಬಾತ ಬಂಧಿತ ವ್ಯಕ್ತಿ. ಈ ಜಗತ್ತಿನಲ್ಲಿ ಏಸು ಮಾತ್ರ ಒಬ್ಬನೇ ದೇವರು. ಜಗತ್ತು ಅಂತ್ಯವಾಗುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಎಲ್ಲ ಮಹಿಳೆಯರು, ಪುರುಷರು ಏಸುವನ್ನು ಮಾತ್ರ ನಂಬಬೇಕು ಎಂದು ಬೈಬಲ್ ನಲ್ಲಿ ಬರೆದಿದ್ದು, ಅದರಂತೆ ನಾನು ಏಸುವಿನ ವಾಕ್ಯಗಳನ್ನು ಬರೆದು ವಿವಿಧ ಕಡೆಗಳಲ್ಲಿ ಹಾಕುತ್ತಿದ್ದೇನೆ. ದಾರಿಯಲ್ಲಿ ಹೋಗುವಾಗ ಸಿಕ್ಕಿದ ಕಾಂಡೋಮ್ ಗಳನ್ನು ಹೆಕ್ಕಿ ಕಾಣಿಕೆ ಡಬ್ಬಿಗಳಲ್ಲಿ ಹಾಕಿದ್ದೇನೆ ಎಂಬುದಾಗಿ ಹೇಳಿದ್ದಾನೆ.
ಬಂಧಿತ ಆರೋಪಿ ದೇವದಾಸ್ ದೇಸಾಯಿ ಮೂಲತಃ ಹುಬ್ಬಳ್ಳಿ ನಿವಾಸಿಯಾಗಿದ್ದು, ಕಳೆದ 24 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ನಂದಿಗುಡ್ಡೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಕಟ್ಟೆಯ ಮೇಲೆ ಡಿ.28ರಂದು ಕಾಂಡೋಮ್ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ದೇವದಾಸ್ ದೇಸಾಯಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇದೇರೀತಿ ವಿವಿಧೆಡೆ 18 ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿಯ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರಗಳನ್ನು ಹಾಕಿ ದುಷ್ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಈ ಕೆಳಕಂಡ ಸ್ಥಳಗಳಲ್ಲಿನ ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ( ಕೂಳೂರು) ಮುಂತಾದ ಕಡೆಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿದ್ದೇನೆ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವುಗಳ ವಿವರ ಇಲ್ಲಿದೆ.
1. ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ
2. ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ
3. ಕೊಂಡಾಣ ದೈವಸ್ಥಾನ
4. ಮಂಗಳಾದೇವಿ ದೇವಸ್ಥಾನ
5. ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ
6. ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ
7. ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ
8. ಕಲ್ಲಾಫು ನಾಗನ ಕಟ್ಟೆ
9. ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ
10. ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ
11. ಕುತ್ತಾರು ಕೊರಗಜ್ಜನ ಕಟ್ಟೆ
12. ಕುಡುಪು ದೈವಸ್ಥಾನ
13. ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ
14. ನಂದಿಗುಡ್ಡೆಯ ಕೊರಗಜ್ಜನ ಗುಡಿ
15. ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ
16. ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು
17. ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್
18. ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು