ಮಂಗಳೂರು: ಏಷ್ಯನ್ ಗೇಮ್ಸ್‌ನ ಸ್ವರ್ಣ ಪದಕ ವಿಜೇತೆ, ಕರ್ನಾಟಕದ ಅಥ್ಲೀಟ್ ಪೂವಮ್ಮ ಅವರು ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜತೆ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‌ನ ವಿ.ಕೆ.ಶೆಟ್ಟಿ ಆಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಲ್ಲಿ ಮದುವೆ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ.ತಮ್ಮಯ್ಯ(ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧುಮಿತ್ರರು, ಸ್ನೇಹಿತರು ಈ ವೇಳೆ ಉಪಸ್ಥಿತರಿದ್ದರು. ಜನವರಿ 1ರಂದು ಕೇರಳದ ತ್ರಿಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಲಿದೆ.
ಪೂವಮ್ಮ- ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲದ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‌ನಲ್ಲಿ 1 ಸ್ವಣ ಪದಕ, 1 ಕಂಚು ಪದಕ ಮತ್ತು 2018ರ ಜಕಾರ್ತ ಏಷ್ಯಾಡ್‌ನಲ್ಲಿ 2 ಸ್ವರ್ಣ ಪದಕ ಜಯಿಸಿದ್ದರು.