ಮಂಗಳೂರು: ಇಬ್ಬರು ಯುವತಿಯರನ್ನು ಪ್ರೀತಿಸಿದ ಯುವಕನೊಬ್ಬ ಸೋಮೇಶ್ವರ ಬೀಚ್‌ನಲ್ಲಿ ಮಾತುಕತೆ ನಡೆಸಲು ಹೋಗಿ ದುರಂತ ಅಂತ್ಯಕಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಮೃತ ದುರ್ದೈವಿ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22) ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಲಾಯ್ಡ್ ಡಿಸೋಜ ಮತ್ತು ಅಶ್ವಿತ ಇಬ್ಬರೂ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಲಾಯ್ಡ್ ಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಇನ್ನೊಬ್ಬ ಕ್ರೈಸ್ತ ಯುವತಿ ಜತೆ ಸ್ನೇಹ ಬೆಳೆದಿದ್ದು, ಇದು ಪ್ರೀತಿಗೆ ತಿರುಗಿತ್ತು.
ಈ ವಿಚಾರ ತಿಳಿದ ಮೊದಲ ಪ್ರೇಯಸಿ ಅಶ್ವಿತಾ, ಲಾಯ್ಡ್ ಬಳಿ ಆಕ್ಷೇಪ ತೆಗೆದಿದ್ದಳು. ಈ ಬಗ್ಗೆ ಮಾತುಕತೆ ನಡೆಸಲೆಂದು ಯುವಕ ಮತ್ತು ಇಬ್ಬರು ಯುವತಿಯರು ಸೋಮೇಶ್ವರ ಕಡಲ ಕಿನಾರೆಗೆ ತೆರಳಿದ್ದರು. ಈ ವೇಳೆ, ಲಾಯ್ಡ್ ಮಾತಿನಿಂದ ಬೇಸರಗೊಂಡ ಅಶ್ವಿತಾ ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಜಿಗಿದಿದ್ದಾಳೆ. ಪ್ರೇಯಸಿ ಸಮುದ್ರಕ್ಕೆ ಹಾರಿದ್ದನ್ನು ನೋಡಿ ಪ್ರಿಯಕರ ಲಾಯ್ಡ್ ಆಕೆಯ ರಕ್ಷಣೆಗಾಗಿ ನೀರಿಗೆ ಹಾರಿದ್ದಾನೆ. ಇದೇ ವೇಳೆ, ಕಾವಲು ಪಡೆಯ ಸಿಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಅಶ್ವಿತಾ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಪ್ರಿಯತಮೆಯ ರಕ್ಷಣೆಗೆ ಹೋಗಿದ್ದ ಲಾಯ್ಡ್ ಸಮುದ್ರಪಾಲಾಗಿದ್ದಾನೆ.