ಮಂಗಳೂರು, ಜ. 29 : ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯ ನರಳಾಟ ಸಿಬ್ಬಂದಿಯಿಂದ ವೀಡಿಯೋ ಗೇಮ್ ಆಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋಗೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲಾಗಿದೆ.
ಅಧಿಕ ರಕ್ತದೊತ್ತಡದಿಂದ ಬಿದ್ದು ತಲೆಗೆ ಗಾಯಗೊಂಡ ಬಂಟ್ವಾಳ ವಗ್ಗದ ವ್ಯಕ್ತಿಯೊಬ್ಬರನ್ನು ಜ.23ರಂದು ವೆನ್ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿ ಆಸ್ಪತ್ರೆಗೆ ತಲುಪಿದಾಗ ಅವರಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾದ ಮೆಡಿಕಲ್ ವಿದ್ಯಾರ್ಥಿ ಮತ್ತು ಅಲ್ಲಿರುವ ಸಿಬ್ಬಂದಿ ತಮ್ಮ ಕಂಪ್ಯೂಟರ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರೋಗಿಯ ಮನೆಯವರು ಅಗತ್ಯ ಚಿಕಿತ್ಸೆ ನೀಡುವಂತೆ ಮಾಡಿದ್ದರೂ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿತ್ತು.
ಈ ವಿಚಾರವಾಗಿ ವೆನ್ಲಾಕ್ ಆಸ್ಪತ್ರೆ ಅಧೀಕ್ಷರಿಂದ ತನಿಖೆ ನಡೆಸಲಾಗಿದೆ. ಈ ಘಟನೆ ಆಸ್ಪತ್ರೆಯಲ್ಲಿ ಜ. 23 ರಂದು ನಡೆದಿತ್ತು. ಕ್ಲಿನಿಕಲ್ ಸೇವೆ ನೀಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯಿಂದ ಕೃತ್ಯ ಎಂಬುವುದು ಸಾಬೀತಾಗಿದೆ.
ವಿದ್ಯಾರ್ಥಿ ಅಮಾನತು :
ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ವಿಡಿಯೋ ಗೇಮ್ ಆಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಆ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲು ಕ್ರಮಕೈಗೊಳ್ಳಲಾಗಿದೆ. ಇದು ಮಾತ್ರವಲ್ಲದೆ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರತ ಸರಕಾರಿ ವೈದ್ಯರು ಮತ್ತು ಶುಶ್ರೂಷಕರು ಈ ಬಗ್ಗೆ ನಿಗಾವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.