ಬೆಂಗಳೂರು, ಮಾ.30: ರಾಜಧಾನಿ ಬೆಂಗಳೂರಿಗೆ ಈಜು ತರಬೇತಿಗೆ ಬಂದಿದ್ದ ನಾಲ್ವರು ದೆಹಲಿ ಮೂಲದ ಆಜು ಪಟುಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ.
ರಜತ್, ಶಿವರಾಮ್, ದೇವ್ ಸಾರೋಲ್, ಯೋಗೀಶ್ ಕುಮಾರ್ ಬಂಧಿತ ಯುವಕರು. ಇವರು ದೆಹಲಿ ಮೂಲದ ವೃತ್ತಿಪರ ಈಜು ಪಟುಗಳಾಗಿದ್ದು, ಹೆಚ್ಚಿನ ಈಜು ತರಬೇತಿ ಪಡೆಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ, ರಜತ್ ಡೇಟಿಂಗ್ ಏಪ್ ಮೂಲಕ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಆನಂತರ ಸಲುಗೆ ಬೆಳೆದು ವಾರದ ಹಿಂದೆ ರಜತ್ ಆಕೆಯನ್ನು ಪಾರ್ಟಿ ಮಾಡುವುದಕ್ಕಾಗಿ ತನ್ನ ರೂಮಿಗೆ ಕರೆದಿದ್ದ. ಈ ವೇಳೆ, ಪಾರ್ಟಿ ಮುಗಿಸಿದ ಬಳಿಕ ರಜತ್ ಮತ್ತು ಆತನ ಇತರ ಗೆಳೆಯರು ಸೇರಿ ಯುವತಿಯ ಮೇಲೆರಗಿ ಸರಣಿ ಅತ್ಯಾಚಾರ ನಡೆಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ವಸಂತನಗರದಲ್ಲಿರುವ ಆಸ್ಪತ್ರೆ ಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಕೆ ಡೇಟಿಂಗ್ ಆಪ್ ನಲ್ಲಿ ತನ್ನ ಪ್ರೊಫೈಲ್ ತೆರೆದಿದ್ದು, ತನ್ನನ್ನು ಸಂಪರ್ಕಿಸುವ ಯುವಕರ ಜೊತೆ ಆಕೆ ಡೇಟಿಂಗ್ ಹೋಗುತ್ತಿದ್ದಳು ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ಈಜು ಸ್ಪರ್ಧೆಗೆ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದು, ಸಂಜಯನಗರದಲ್ಲಿ ವಾಸವಾಗಿದ್ದರು. ಆರೋಪಿಗಳ ಪೈಕಿ ರಜತ್ ಅದೇ ಆಪ್ ಮೂಲಕ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದು, ಇನ್ ಸ್ಟಾಗ್ರಾಂನಲ್ಲಿಯೂ ಚಾಟಿಂಗ್ ಮಾಡುತ್ತಿದ್ದ. ಮೊಬೈಲ್ ನಂಬರ್ ಕೂಡಾ ಪರಸ್ಪರ ಹಂಚಿಕೊಂಡಿದ್ದರು. ಬಳಿಕ ಹೊಟೇಲಿಗೆ ಊಟಕ್ಕೆ ಕರೆಸಿಕೊಂಡು ಆನಂತರ ಹೊಟೇಲ್ ಬದಲಾಗಿ ಮನೆಯಲ್ಲೇ ಊಟ ಮಾಡೋಣ ಎಂದು ಆನ್ ಲೈನ್ ನಲ್ಲಿ ಊಟ ತರಿಸಿಕೊಂಡಿದ್ದಾನೆ. ಐವರು ಒಟ್ಟಿಗೆ ಊಟ ಮಾಡಿ ಮದ್ಯ ಸಹ ಸೇವಿಸಿದ್ದಾರೆ. ತಡರಾತ್ರಿಯಾದ ಕಾರಣ ಆಕೆ ಅಲ್ಲೇ ಮಲಗಿದ್ದು, ಈ ವೇಳೆ ನಾಲ್ವರೂ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.