ಉಡುಪಿ, ಮಾ.30: ಹಿಂದು ದೇವಸ್ಥಾನ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಮುಸ್ಲಿಂ ವರ್ತಕರ ಒಕ್ಕೂಟದ ಸದಸ್ಯರು ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ, ಸಾಮರಸ್ಯ ನೆಲೆಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ ಅಬೂಬಕ್ಕರ್ ಆತ್ರಾಡಿ ನೇತೃತ್ವದಲ್ಲಿ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಮುಸ್ಲಿಂ ವರ್ತಕರು, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿರುವುದರಿಂದ ಬೀದಿಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು. ಮುಸಲ್ಮಾನ ಸಮುದಾಯ ಕೂಡ ಶಾಂತಿಯನ್ನು ಬಯಸುತ್ತದೆ. ಒಬ್ಬರು- ಇಬ್ಬರು ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವುದು ಸೂಕ್ತವಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಹಾಗೆ ಸಹಬಾಳ್ವೆಯಿಂದ ಬಾಳಬೇಕು. ಹಿಂದೆ ಆಗಿರುವ ಘಟನೆಗಳನ್ನು ಮರೆತು ಸಹಬಾಳ್ವೆಯಿಂದ ಬಾಳಬೇಕಾಗಿದೆ. ಒಂದು ಸಮಿತಿ ರಚನೆ ಮಾಡುವಂತೆ ಸೂಚನೆಯನ್ನು ಸ್ವಾಮೀಜಿ ಕೊಟ್ಟಿದ್ದಾರೆ.
ಮುಸ್ಲಿಂ ವರ್ತಕರ ಸ್ವಾಮೀಜಿ ಭೇಟಿ ಸಂದರ್ಭದಲ್ಲಿ ಕ್ರೈಸ್ತ ಧರ್ಮಗುರು ಫಾ. ಚಾಲ್ಸ್ ಅವರನ್ನೂ ಕರೆ ತರಲಾಗಿತ್ತು. ನಾವೆಲ್ಲರೂ ಮನುಷ್ಯತ್ವದ ತತ್ವದಲ್ಲಿ ಬಾಳುವವರು. ಹೊಂದಾಣಿಕೆಯಿಂದ ನಡೆದುಕೊಂಡು ಹೋದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿ ಕೆಲವರು ತಪ್ಪುಗಳನ್ನು ಮಾಡುತ್ತಾರೆ. ಒಬ್ಬರಿಬ್ಬರು ಮಾಡಿದ ತಪ್ಪಿನಿಂದ ಹಲವರಿಗೆ ಸಮಸ್ಯೆಗಳು ಆಗುತ್ತದೆ. ತಪ್ಪು-ಒಪ್ಪುಗಳನ್ನು ಸರಿ ಮಾಡಿಕೊಂಡು ಹೋದಲ್ಲಿ ಶಾಂತಿ ಸಹಬಾಳ್ವೆ ಸಾಧ್ಯ ಎಂದವರು ಹೇಳಿದರು. ಧರ್ಮ ಎಲ್ಲರಿಗೂ ಬೇಕು, ಧರ್ಮಕ್ಕಾಗಿ ಮನುಷ್ಯತ್ವವನ್ನು ಬೇರ್ಪಡಿಸುವುದು ಸರಿಯಲ್ಲ. ಎಂದು ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರು ಫಾ. ಚಾರ್ಲ್ಸ್ ಹೇಳಿದ್ದಾರೆ.
ಉಡುಪಿ ಶೋಕಮಾತಾ ಇಗರ್ಜಿ ಧರ್ಮಗುರು ಫಾ| ಚಾರ್ಲ್ಸ್, ಉಡುಪಿ ಧರ್ಮಗುರು ಇಮಾನುಲ್ಲಾಹ್ ಖಾನ್, ಸಾಮಾಜಿಕ ಕಾರ್ಯಕರ್ತ ಅಬ್ದುಲ್ಲಾ ನಾವುಂದ,ಅಬ್ದುಲ್ಲಾ ಪರ್ಕಳ, ಮಣಿಪಾಲ, ಉದ್ಯಮಿ ಕೆ. ಅಬೂಬಕ್ಕರ್ , ಉಡುಪಿ ಎಲೆಕ್ಟಿಕಲ್ಸ್ ಇಲೆಕ್ಟ್ರಾನಿಕ್ಸ್ ಅಧ್ಯಕ್ಷ ಬಿನೇಶ್, ಗಂಗಾಧರ, ಉದ್ಯಮಿಗಳಾದ ಮುಹಮ್ಮದ್ ಮೌಲಾ, ಅಬೂಬಕರ್ ನೇಜಾರ್, ಜಾಮಿಯಾ ಮಸೀದಿ ಕಾರ್ಯದರ್ಶಿ ವಿ.ಎಸ್. ಉಮರ್, ಬೀದಿ ಬದಿ ವ್ಯಾಪಾರ ಮತ್ತು ಜಾತ್ರಾ ವ್ಯಾಪಾರದ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್ , ಬಳಕೆದಾರರ ವೇದಿಕೆಯ ಬಿ.ಎಚ್. ಶೆಟ್ಟಿಗಾರ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post