ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದೇವಸ್ಥಾನ, ಮನೆ, ರಸ್ತೆಗಳಿಗೆ ನೀರು ನುಗ್ಗಿದೆ. ಮಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಗೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನಿನ್ನೆ ರಾತ್ರಿಯಿಂದ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಮಂಗಳೂರು – ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಮತ್ತೊಂದೆಡೆ ಕೇರಳ-ಮುಂಬೈ ಸಂಪರ್ಕಿಸುವ ಕೊಟ್ಟಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಸವಾರರು ಪರದಾಡುವಂತಾಗಿದೆ. ನಗರ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ಥವಾಗಿದೆ.
ಮಂಗಳೂರಿನ ನೀರು ಮಾರ್ಗದ ಬದಿಬಡಿ ಕ್ಷೇತ್ರದಲ್ಲಿ ನೆರೆ ನೀರು ಬಂದಿದ್ದು, ಸುತ್ತಲಿನ ಹಲವು ಮನೆಗಳು ಜಲಾವೃತವಾಗಿವೆ. ವಿವಿಧ ಕಡೆಗಳಲ್ಲಿ ತಗ್ಗು ಪ್ರದೇಶದ ಹಲವು ಮನೆಗಳು ಕೃತಕ ನೆರೆಯಿಂದ ಜಲಾವೃತವಾಗಿವೆ. ಪಡೀಲ್ನಿಂದ ಬಜಾಲ್ಗೆ ಹೋಗುವ ಬಜಾಲ್ ಅಂಡರ್ ಪಾಸ್ ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನಗಳ ಓಡಾಟ ಅಸಾಧ್ಯವಾಗಿದೆ.
ಮಂಗಳೂರಿನ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆ ಸಮೀಪದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳೆದ ವರ್ಷ ಸೇತುವೆಯ ತಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದನ್ನು ಕಾಮಗಾರಿ ಮೂಲಕ ಸರಿಪಡಿಸಲಾಗಿತ್ತು. ಈಗ ರಸ್ತೆಯಲ್ಲೇ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸುಬ್ರಹ್ಮಣ್ಯ ರೈಲು ಸಂಚಾರ ರದ್ದು: ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮತ್ತು ಪಡೀಲ್ ನಡುವೆ ಗುಡ್ಡ ಕುಸಿದ ಪರಿಣಾಮ ಮಂಗಳೂರು ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಎರಡು ರೈಲುಗಳ ಸಂಚಾರವನ್ನು ಇಂದು ರದ್ದುಪಡಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post