ಮಂಗಳೂರು: ‘ತಮ್ಮ ಬೆಂಬಲಿಗರಿಂದ ವಿಶ್ವಕರ್ಮ ಸಮಾಜಕ್ಕೆ ಸಂಬಂಧಿಸಿದಂತೆ ವಿವಾದಾಸ್ಪದ ಹೇಳಿಕೆ ಕೊಡಿಸದಂತೆ ವಿಧಾನ ಪರಿಷತ್ತಿನ ಸದಸ್ಯ ಕೆ.ಪಿ.ನಂಜುಂಡಿ ಅವರಿಗೆ ಬುದ್ಧಿಹೇಳಿ’ ಎಂದು ಸಮಾಜದ ಮುಖಂಡರ ನಿಯೋಗವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಒತ್ತಾಯಿಸಿದೆ.
ಕಟೀಲ್ ಅವರನ್ನು ಬುಧವಾರ ಭೇಟಿ ಮಾಡಿದ ನಿಯೋಗವು, ‘ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್ ಮತ್ತು ಅರೆಮಾದನ ಹಳ್ಳಿಯ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜದ ಮುಖಂಡರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಸಮಾಜದ ಅಭಿವೃದ್ಧಿ ಬಗ್ಗೆ ಮನವಿಯೊಂದನ್ನು ಸಲ್ಲಿಸಿದ್ದರು. ಇದನ್ನು ಸ್ವಾಗತಿಸುವ ಬದಲು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರ ಬೆಂಬಲಿಗರು, ‘ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ವಕರ್ಮ ಸಮಾಜ ಒಡೆಯಲು ಸಂಚುರೂಪಿಸಿದ್ದಾರೆ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ’ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ‘ಕೆ.ಪಿ.ನಂಜುಂಡಿಯವರ ಹೆಸರಿನಲ್ಲಿ ಅವರ ಬೆಂಬಲಿಗರು ಹೇಳಿಕೆ ನೀಡುತ್ತಿರುವುದರಿಂದ ಸಮಾಜದ ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುತ್ತಿದೆ. ಸಮಾಜ ಒಡೆಯುತ್ತಿರುವ ಕೆಲಸವನ್ನು ಬೇರಾರೂ ಮಾಡುತ್ತಿಲ್ಲ. ಸ್ವತಃ ನಂಜುಂಡಿಯವರೇ ಮಾಡುತ್ತಿದ್ದಾರೆ. ಅವರನ್ನು ಕರೆದು ಬುದ್ಧಿ ಹೇಳಬೇಕು’ ಎಂದು ಕಟೀಲ್ ಅವರನ್ನು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಮುಖಂಡ ಅಲೆವೂರು ಯೋಗೀಶ್ ಆಚಾರ್ಯ, ಸಮಾಜದ ಮುಖಂಡರಾದ ಕೇಶವ ಆಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ತ್ರಾಸಿ ಸುಧಾಕರ್ ಆಚಾರ್ಯ, ವಸಂತ ಆಚಾರ್ಯ ಸುರತ್ಕಲ್ ಇದ್ದರು.