ಮಂಗಳೂರು: ರಾಜ್ಯದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿರುವ ಬೆನ್ನಲ್ಲೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೂ ರಾಜ್ಯ ಸರಕಾರ ಮುಂದಾಗಿದೆ.
ನಕ್ಸಲರ ಶರಣಾಗತಿ, ಪುನರ್ವಸತಿಗೆ ಸಂಬಂಧಿಸಿದ ಈ ಹಿಂದಿನ ಯೋಜನೆಗಳಿಗೆ ಹೊಸ ರೂಪ ನೀಡಲಾಗಿದ್ದು ಶರಣಾಗುವ ಓರ್ವ ನಕ್ಸಲನಿಗೆ 7.50 ಲ.ರೂ. ವರೆಗೆ ನಗದು ಪರಿಹಾರ/ಪ್ರೋತ್ಸಾಹಧನ ನೀಡಲಾಗುವುದು. ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಎನಿಸುವಂತಹ ಪ್ಯಾಕೇಜ್ ನೀಡಲೂ ನಿರ್ಧರಿಸಲಾಗಿದೆ. ಶರಣಾಗತರಾಗುವವರಿಗೆ ನಗದು ಜತೆಗೆ ಕೌಶಲ ತರಬೇತಿ, ಇತರ ಪ್ರೋತ್ಸಾಹ ಧನ, ಪ್ರಕರಣ ವಾಪಸು ಹಾಗೂ ಪುನರ್ವಸತಿ ಮತ್ತಿತರ ಯೋಜನೆಗಳನ್ನು ಹೊಂದಲಾಗಿದೆ. 2015ರಲ್ಲಿದ್ದ ನಕ್ಸಲ್ ಶರಣಾಗತಿ ಯೋಜನೆಯನ್ನು ಇದೀಗ ಪರಿಷ್ಕರಿಸಿದ್ದು, ನಕ್ಸಲರು/ಎಡಪಂಥೀಯ ಭಯೋತ್ಪಾದಕರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಸರಕಾರದ ಲೆಕ್ಕಾಚಾರ.
ಉನ್ನತೀಕರಿಸಿದ ಯೋಜನೆಯಡಿ ಶರಣಾಗುವ ನಕ್ಸಲರನ್ನು 3 ಶ್ರೇಣಿಗಳಲ್ಲಿ ವಿಭಾಗಿಸಿ “ಪ್ರವರ್ಗ ಎ’ಯವರಿಗೆ 7.5 ಲ.ರೂ., ಪ್ರವರ್ಗ “ಬಿ’ಯವರಿಗೆ 4 ಲ.ರೂ. ಮತ್ತು ಪ್ರವರ್ಗ “ಸಿ’ಯವರಿಗೆ 2 ಲ.ರೂ. ನಿಗದಿಗೊಳಿಸಲಾಗಿದೆ. ನಕ್ಸಲ್ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯರಾಗಿದ್ದು ಸೆಂಟ್ರಲ್ ಕಮಿಟಿ, ರೀಜನಲ್ ಕಮಿಟಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಏರಿಯಾ ಸಮಿತಿಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕಮಿಟಿಗಳ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತವರ ವಿರುದ್ಧ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಸ್ಥಳೀಯ, ಅಂದರೆ ಕರ್ನಾಟಕದಲ್ಲಿ ಜನಿಸಿರುವ/ಕರ್ನಾಟಕದಲ್ಲಿ ನಿವಾಸ ಹೊಂದಿರುವವರನ್ನು ಪ್ರವರ್ಗ “ಎ’ ಎಂದು ಗುರುತಿಸಲಾಗುತ್ತದೆ.
ನಕ್ಸಲ್ ಸಂಘಟನೆಗಳ ಸದಸ್ಯರಾಗಿದ್ದು ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯರಾಗಿದ್ದು ವಿವಿಧ ಸಮಿತಿಗಳ ಪೈಕಿ ಯಾವುದಾದರೂ ಒಂದು ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತವರ ವಿರುದ್ಧ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ನಿವಾಸ ಹೊಂದದೇ ಇರುವವರನ್ನು ಪ್ರವರ್ಗ “ಬಿ’ಯಲ್ಲಿ ಸೇರಿಸಲಾಗುತ್ತದೆ. ಎಡಪಂಥೀಯ ಭಯೋತ್ಪಾದನಾ ಸಂಘಟನೆಯ ಚಟುವಟಿಕೆಗಳನ್ನು ಬೆಂಬಲಿಸುವವರು, ಕೀಪರ್ ಗಳು, ಕೊರಿಯರ್‌ಗಳು, ಮಾಹಿತಿದಾರರು ಮತ್ತು ಈ ಸಂಘಟನೆಗೆ ನೇಮಕ ಮಾಡುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದವರಾಗಿದ್ದು ಪ್ರವರ್ಗ 1 ಮತ್ತು 2ರ ಅಡಿಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ತಮ್ಮ ವಿರುದ್ಧ ದೋಷಾರೋಪಣೆ ಪತ್ರ ಹೊಂದಿರುವವರು ಪ್ರವರ್ಗ 3ರಲ್ಲಿ ಇರುತ್ತಾರೆ.
ನಕ್ಸಲರು ತಮ್ಮ ಶಸ್ತ್ರಗಳನ್ನು ತಂದು ಒಪ್ಪಿಸಿದಲ್ಲಿ ಅಂಥವರಿಗೆ ಪ್ರತ್ಯೇಕ ಸಂಭಾವನೆ ಸಿಗಲಿದೆ. ಅಲ್ಲದೆ, ತರಬೇತಿ ಪಡೆಯುವರಿಗೆ ತಿಂಗಳಿಗೆ 5 ಸಾವಿರದಂತೆ ಎರಡು ವರ್ಷಗಳ ಕಾಲ ನಿಶ್ಚಿತ ಮೊತ್ತ ಸಿಗಲಿದೆ. ಇದಲ್ಲದೆ, ಅವರ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುವುದು. ಅವರಿಗೆ ವಕೀಲರ ಸೌಲಭ್ಯ ಬೇಕಿದ್ದಲ್ಲಿ ಅದನ್ನೂ ಒದಗಿಸಲಾಗುವುದು. ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 14 ನಕ್ಸಲರು ಸರಕಾರದ ಮುಂದೆ ಶರಣಾಗಿದ್ದು, ಮುಖ್ಯ ವಾಹಿನಿಗೆ ಬಂದಿದ್ದಾರೆ. ಕಾಡಿನಲ್ಲಿ ಅಡಗಿಕೊಂಡು ಜೀವನ ಸವೆಸುವ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಮತ್ತೆ ನೈಜ ಜೀವನಕ್ಕೆ ಹೊರಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಆಯುಧ ಶರಣಾಗತಿಗೆ ಹೆಚ್ಚುವರಿ ಮೊತ್ತ ಶರಣಾಗುವವರು ತಮ್ಮ ಶಸ್ತ್ರಾಸ್ತ ಅಥವಾ ಉಪಕರಣಗಳನ್ನು ಒಪ್ಪಿಸಿದರೆ ಪ್ರತೀ ಆಯುಧ ಅಥವಾ ಉಪಕರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉದಾಹರಣೆಗೆ ಎ.ಕೆ.47/56/74 ರೈಫಲ್‌ಗೆ (ಒಂದು ಆಯುಧಕ್ಕೆ) 30,000 ರೂ., ಯುಎಂಜಿ/ಜಿಪಿಎಂ/ಆರ್‌ಪಿಜಿ/ ಸ್ನೆ„ಪರ್ ರೈಫಲ್‌ಗೆ (ಒಂದು ಆಯುಧಕ್ಕೆ) 50,000 ರೂ., ಪಿಸ್ತೂಲ್/ರಿವಾಲ್ವರ್ ಒಂದು ಆಯುಧಕ್ಕೆ 10,000 ರೂ., ಎಸ್‌ಎಎಂ ಮಿಸೈಲ್ (ಒಂದು ಆಯುಧಕ್ಕೆ) 40,000 ರೂ. ನೀಡಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post