ಬೆಂಗಳೂರು : ಆ 31 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐಷಾರಾಮಿ ಆಡಿ ಕ್ಯೂ 3 ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.ಅಪಘಾತಕ್ಕೆ ತುತ್ತಾದ ಕಾರಿಗೆ ಫ್ಯಾನ್ಸಿ ನಂಬರ್ ಇತ್ತು. ಅದು KA 03 MY 6666.
ಮಧ್ಯರಾತ್ರಿ 1-30 ರ ಸುಮಾರಿಗೆ ಕೋರಮಂಗಲದ ಮಂಗಳ ಕಲ್ಯಾಣ ಮಂದಿರದ ಬಳಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಫುಟ್ ಮೇಲೇರಿದ ಕಾರು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, 20ರಿಂದ 30 ವರ್ಷದವರಾಗಿದ್ದಾರೆ. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳು.
ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿರುವ 7 ಜನರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮದ್ಯ ಸೇವನೆ ಮಾಹಿತಿ ಲಭ್ಯವಾಗಲಿದೆ. ಮೃತರಲ್ಲಿ ಕೆಲವರು ಕೋರಮಂಗಲದ ಜೋಲೋ ಸ್ಟೇ ಪಿಜಿಯಲ್ಲಿ ವಾಸವಿದ್ರು. ಈ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ
ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ:
ಕೋರಮಂಗಲದಲ್ಲಿ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ. ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಓರ್ವ ದಂಪತಿ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಕೆಲವರು ಪಿಜಿಯಲ್ಲಿದ್ದರು ಎಂದು ತಿಳಿಸಿದ್ದಾರೆ.