ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡಿದೆ. ತಾಲಿಬಾನ್ ಉಗ್ರರು ನೀಡಿದ್ದ ಗಡುವಿಗಿಂತ 24 ತಾಸು ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಬಿಟ್ಟು ಹೋಗಿರುವ ಸುಮಾರು 200 ವಿಮಾನ, ಹೆಲಿಕಾಪ್ಟರ್ಗಳು ಹಾಗೂ 85 ಶತಕೋಟಿ ಡಾಲರ್ ಮೌಲ್ಯದ ಯುದ್ಧೋಪಕರಣಗಳು ತಾಲಿಬಾನ್ ವಶಕ್ಕೆ ಬಂದಿವೆ ಎಂದು ಹೇಳಲಾಗಿದೆ. ತಾಲಿಬಾನ್ ಕೈಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರ್ಣ ವಿವರ ಇನ್ನೂ ಸಿಕ್ಕಿಲ್ಲ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ಕೈವಶವಾಗಿ 15 ದಿನ ಕಳೆದರೂ ತಾಲಿಬಾನ್ ಸಂಘಟನೆಯ ಪರಮೋಚ್ಛ ನಾಯಕ ಹೇಬಿತುಲ್ಲಾ ಅಖುಂದಾಜಾ ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೇಬಿತುಲ್ಲಾ ಅಖುಂದಾಜಾ ಕಂದಹಾರ್ ನಗರದಲ್ಲಿದ್ದಾರೆ. ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ.
Discover more from Coastal Times Kannada
Subscribe to get the latest posts sent to your email.
Discussion about this post