ಮಂಗಳೂರು: ಉಕ್ರೇನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ ಸಿಲುಕಿಕೊಂಡಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಲಭಿಸಿದ್ದು ಅವರಲ್ಲಿ ಕೆಲವರು ಬಸ್, ರೈಲಿನ ಮೂಲಕ ಉಕ್ರೇನ್ ತೊರೆದು ಮಾಲ್ಡೋವಾ, ಹಂಗೇರಿ ಮೊದಲಾದೆಡೆ ಪ್ರಯಾಣ ಬೆಳೆಸಿದ್ದಾರೆ. ಉಕ್ರೇನ್ ಮೇಲೆ ದಾಳಿ ಮುಂದು ವರಿದಿರುವುದರಿಂದ ಮತ್ತು ಕೆಲವು ಮಂದಿ ನೇರ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಊರಿನಲ್ಲಿರುವ ಅವರ ಹೆತ್ತವರ ಆತಂಕ ಮುಂದುವರಿದಿದೆ.
ತೀವ್ರ ದಾಳಿಗೊಳಗಾದ ಖಾರ್ಕಿವ್‌ನಲ್ಲಿದ್ದ ವಿದ್ಯಾರ್ಥಿನಿ ದೇರೆಬೈಲ್‌ನ ಅನೈನಾ ಅನ್ನಾ ಮಂಗಳವಾರ ರೈಲಿನಲ್ಲಿ ಪೋಲಂಡ್ ಕಡೆಗೆ ಹೊರಟಿದ್ದಾರೆ. ಆಕೆಯ ಪಾಸ್‌ಪೋರ್ಟ್ ಏಜೆಂಟ್‌ನ ಬಳಿ ಇದ್ದು ಇನ್ನಷ್ಟು ತೊಂದರೆಗೆ ಸಿಲುಕಿ ದ್ದಾರೆ. ಈ ಬಗ್ಗೆ ಪ್ರಧಾನಿಯವರಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
“ನಮ್ಮ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ ಮಂಗಳವಾರ ಕಟ್ಟಡವೊಂದನ್ನು ಸ್ಫೋಟಿಸಲಾಯಿತು. ಹಾಗಾಗಿ ಬಂಕರ್ ಬಿಟ್ಟು ರೈಲು ಹತ್ತಿದ್ದೇನೆ. ಆದರೆ ನನ್ನ ಪಾಸ್‌ಪೋರ್ಟ್ ಏಜೆಂಟ್ ಒಬ್ಬರ ಬಳಿ ಇದೆ. ಅವರಿಗೆ ಕರೆ ಮಾಡಿದರೆ ಅವರಿರುವಲ್ಲಿಗೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ ನಾವಿರುವ ಸ್ಥಳದ ಸುತ್ತಲೂ ದಾಳಿ ನಡೆಯುತ್ತಿದ್ದು ಹೋಗಲು ಸಾಧ್ಯವಾಗುತ್ತಿಲ್ಲ. ದಿಕ್ಕು ತೋಚದೆ ರೈಲಿನಲ್ಲಿ ಹೊರಟಿದ್ದೇನೆ. ನನಗೆ ಸಹಾಯ ಮಾಡಿ’ ಎಂದು ಅನೈನಾ ಹೇಳಿಕೊಂಡಿದ್ದಾರೆ ಎಂದು ಮಂಗಳೂರಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.
12 ಮಂದಿ ನೇರ ಸಂಪರ್ಕದಲ್ಲಿ:
ಉಕ್ರೇನ್‌ನಲ್ಲಿ ಸದ್ಯ ದ.ಕ. ಜಿಲ್ಲೆಯ 18 ಮಂದಿ ಸಿಲುಕಿರುವ ಮಾಹಿತಿ ಲಭಿಸಿದೆ. 12 ಮಂದಿ ಹಾಗೂ ಅವರ ಕುಟುಂಬಸ್ಥರು ಜಿಲ್ಲಾಡಳಿತದೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಉಳಿದ 6 ಮಂದಿ ಸ್ಟೇಟ್ ಏಜೆನ್ಸಿಯ ಜತೆ ಸಂಪರ್ಕದಲ್ಲಿದ್ದಾರೆ. ಹಲವರು ರೈಲು, ಬಸ್‌ಗಳ ಮೂಲಕ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಎಲ್ಲರನ್ನೂ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಈ ವಿದ್ಯಾರ್ಥಿಗಳ ಹೆತ್ತವರಿಗೆ ಧೈರ್ಯ ತುಂಬಲು ತಹಶೀಲ್ದಾರರನ್ನು ಕಳುಹಿಸಿಕೊಡಲಾಗಿದೆ. ಎಲ್ಲ ಪೋಷಕರೊಂದಿಗೆ ವರ್ಚುವಲ್ ಸಭೆ ಆಯೋಜಿಸಿ ಜಿಲ್ಲಾಡಳಿತದಿಂದ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.