ಮಂಗಳೂರು, ನ.2: ರಾಜಸ್ಥಾನ ಮೂಲದ ಚಾಣಾಕ್ಷ ಕಳ್ಳರಿಬ್ಬರು ಜಾಗತಿಕ ಮಟ್ಟದ ಆನ್ಲೈನ್ ದೈತ್ಯ ಅಮೆಜಾನ್ ಕಂಪನಿಯನ್ನೇ ದೋಚುವ ಕೆಲಸ ಮಾಡಿದ್ದಾರೆ. ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡ ಇಬ್ಬರು ಯುವಕರು ಅತ್ಯಂತ ಚಾಣಾಕ್ಷ ರೀತಿಯಲ್ಲಿ ಮೋಸದ ಜಾಲ ಹೆಣೆದಿದ್ದು, ದೇಶಾದ್ಯಂತ 5 ವರ್ಷಗಳಲ್ಲಿ 30 ಕೋಟಿಗೂ ಹೆಚ್ಚು ಮೊತ್ತದ ಸಾಮಗ್ರಿಗಳನ್ನು ಖರೀದಿಸಿ ಮೋಸ ಮಾಡಿದ್ದಾರೆ.
ಇವರ ಜಾಲವನ್ನು ಅಷ್ಟೇ ಚಾಣಾಕ್ಷ ರೀತಿಯಲ್ಲಿ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಕತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು. ಅಮೆಜಾನ್ ಕಂಪನಿಯ ಆನ್ಲೈನ್ ಮಾರುಕಟ್ಟೆಯಿಂದ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಖರೀದಿಸಿ, ಹಣ ಕೊಟ್ಟಂತೆ ನಟಿಸಿ ದೋಖಾ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇವರ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ವಿತರಣೆ ಮಾಡುವ ಹೊಣೆ ಹೊತ್ತುಕೊಂಡ ಮಹೀಂದ್ರಾ ಲಾಜಿಸ್ಟಿಕ್ಸ್ ಕಂಪನಿಯ ವಿಜಿಲೆನ್ಸ್ ಅಧಿಕಾರಿಯೊಬ್ಬರು ಮೋಸದ ಜಾಲದ ಬಗ್ಗೆ ಮಂಗಳೂರಿನ ಉರ್ವಾ ಠಾಣೆಯಲ್ಲಿ ನೀಡಿದ ದೂರಿನಂತೆ ತನಿಖೆ ಆರಂಭಿಸಿದ ಉರ್ವಾ ಠಾಣೆ ಇನ್ಸ್ ಪೆಕ್ಟರ್ ಭಾರತಿ ನೇತೃತ್ವದ ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ರಾಜಕುಮಾರ್ ಮೀನಾ ಮತ್ತು ರಾಜಸ್ಥಾನದಲ್ಲಿ ಸುಭಾಸ್ ಗುರ್ಜರ್ ಎಂಬವರನ್ನು ಬಂಧಿಸಿದ್ದಾರೆ. ಸೆ.21ರಂದು ಅಮೆಜಾನ್ ಕಂಪನಿಯ ಡೆಲಿವರಿ ಬಾಯ್ ಮೊಹಮ್ಮದ್ ನಿಶಾಕ್ ಎಂಬಾತ ಉರ್ವಾ ಪೊಲೀಸರಿಗೆ ದೂರು ನೀಡಿದ್ದರು. ಒಟ್ಟು 12 ರೀತಿಯ ಸಾಮಗ್ರಿಗಳನ್ನು ಖರೀದಿಸಿ, ಅದರಲ್ಲಿ ದೊಡ್ಡ ಮೌಲ್ಯ ಹೊಂದಿರುವ (ತಲಾ 5.32 ಲಕ್ಷ) ಎರಡು ಸೋನಿ ಕ್ಯಾಮರಾಗಳನ್ನು ಆರ್ಡರ್ ಮಾಡಿ ಕೊನೆಕ್ಷಣದಲ್ಲಿ ಡೆಲಿವರಿ ಕ್ಯಾನ್ಸಲ್ ಮಾಡಿದ ಬಗ್ಗೆ ದೂರು ಹೇಳಿಕೊಂಡಿದ್ದರು. ಪೊಲೀಸರಿಗೆ ಈ ದೂರನ್ನು ಕೇಳಿ ಪ್ರಕರಣ ಯಾವ ರೀತಿಯದು, ಹೇಗಾಗಿದೆ ಅಂತಲೇ ಅರ್ಥ ಆಗಿರಲಿಲ್ಲ.
ಒಟ್ಟು 11.32 ಲಕ್ಷ ಮೌಲ್ಯದ ಮೂರು ಸೋನಿ ಕ್ಯಾಮರಾ ಸೇರಿದಂತೆ 2ರಿಂದ 5 ಸಾವಿರ ಮೌಲ್ಯದ ಹತ್ತಕ್ಕೂ ಹೆಚ್ಚು ಸಣ್ಣ ಪುಟ್ಟ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಅಮೆಜಾನ್ ಕಂಪನಿಯಲ್ಲಿ ಆರ್ಡರ್ ಮಾಡುತ್ತಾರೆ. 11.32 ಲಕ್ಷ ರೂ. ಮೊತ್ತವನ್ನು ಅಡ್ವಾನ್ಸ್ ಪೇಮೆಂಟ್ ಮಾಡುತ್ತಾರೆ. ಕಡಿಮೆ ಮೊತ್ತದ ಉಪಕರಣಗಳಿಗೆ ಡೆಲಿವರಿ ಸಂದರ್ಭದಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಾರೆ. ಎಲ್ಲ ಉಪಕರಣಗಳನ್ನೂ ಏಕಕಾಲದಲ್ಲಿ ನೀಡುವಂತೆ ಆರೋಪಿಗಳು ತಿಳಿಸುತ್ತಾರೆ. ಮಂಗಳೂರಿನ ಪ್ರಕರಣದಲ್ಲಿ ಡೆಲಿವರಿ ಬಾಯ್ ಮೊಹಮ್ಮದ್ ನಿಶಾಕ್, ಸಾಮಗ್ರಿ ಆರ್ಡರ್ ಮಾಡಿದ್ದ ಅಮಿತ್ ಎಂದು ಹೆಸರಿಸಿದ್ದ ವ್ಯಕ್ತಿಯನ್ನು ಭಾರತ್ ಮಾಲ್ ಬಳಿಗೆ ಕರೆಸಿಕೊಂಡಿದ್ದು, ಎಲ್ಲ ಐಟಂಗಳನ್ನು ಏಕಕಾಲದಲ್ಲಿ ತಂದಿಟ್ಟಿದ್ದ. ಅಮಿತ್ ಸ್ಪಾಟ್ ಪೇಮೆಂಟ್ ಬಗ್ಗೆ ಓಟಿಪಿ ಪಡೆದು, ಹಣವನ್ನು ನೀಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದರೆ, ಆತನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಡೆಲಿವರಿ ಬಾಯ್ ಗೆ ತಿಳಿಯದಂತೆ ಐಟಂ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿದ್ದಾನೆ. ಇದೇ ವೇಳೆ, ಆರೋಪಿ ತನ್ನ ಫೋನ್ ಸ್ವಿಚ್ ಆಫ್ ಆಯ್ತೆಂದು ಹೇಳಿ ಸಣ್ಣ ಮೊತ್ತದ 7-8 ಸಾಮಗ್ರಿಯನ್ನು ಪಡೆದು ಮತ್ತೆ ಬರಲು ತಿಳಿಸುತ್ತಾನೆ. ಡೆಲಿವರಿ ಬಾಯ್ ತನ್ನ ಐಟಂ ಬದಲಾಗಿರುವುದನ್ನು ತಿಳಿಯದೆ ಮತ್ತೆ ಕರೆ ಮಾಡುತ್ತೇನೆಂದು ಹೇಳಿ ನೇರವಾಗಿ ತನ್ನ ಕಚೇರಿಗೆ ತೆರಳಿದ್ದ. ಅಷ್ಟರಲ್ಲಿಯೇ ಆರೋಪಿಗಳು ತಾವು ಆರ್ಡರ್ ಮಾಡಿದ್ದ 11 ಲಕ್ಷ ಮೊತ್ತದ ಸಾಮಗ್ರಿಯನ್ನು ಕ್ಯಾನ್ಸಲ್ ಮಾಡುತ್ತಾರೆ.
ಅಮೆಜಾನಲ್ಲಿ ಯಾರೇ ಆದ್ರೂ ಆರ್ಡರ್ ಕ್ಯಾನ್ಸಲ್ ಮಾಡಿದ ಕೂಡಲೇ ಗ್ರಾಹಕ ನೀಡಿದ್ದ ಹಣ ಮರು ಪಾವತಿ ಆಗುತ್ತದೆ. ಇದರ ಆಧಾರದಲ್ಲಿ ಆರೋಪಿಗಳು ತಮ್ಮ ದೊಡ್ಡ ಮೊತ್ತದ ಸಾಮಗ್ರಿಯನ್ನು ಕ್ಯಾನ್ಸಲ್ ಮಾಡುತ್ತಿದ್ದಂತೆ, ಅವರ ಹಣ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ ಅಷ್ಟರಲ್ಲೇ ಟ್ರ್ಯಾಕಿಂಗ್ ಮಾರ್ಕ್ ತಪ್ಪಿಸಿ, 11 ಲಕ್ಷ ಮೊತ್ತದ ಅತಿ ಮೌಲ್ಯದ ಕ್ಯಾಮರಾಗಳು ಆರೋಪಿಗಳ ಕೈಸೇರಿರುತ್ತದೆ. ಮಂಗಳೂರಿನ ಪ್ರಕರಣದಲ್ಲಿ ಆರ್ಡರ್ ಕ್ಯಾನ್ಸಲ್ ಆಗಿರುವುದರಿಂದ ಒಂದೇ ಪ್ರಕಾರದ ಬಾಕ್ಸನ್ನು ತೆರೆದು ನೋಡಿದಾಗ, ಕ್ಯಾಮರಾ ಇರಲಿಲ್ಲ. ಚೆಕ್ ಮಾಡಿದಾಗ, ಟ್ರಾಕಿಂಗ್ ಐಡಿಯೇ ಬದಲಾಗಿದ್ದು ಕಂಡುಬಂದಿತ್ತು. ಕೂಡಲೇ ಮಹೀಂದ್ರಾ ಲಾಜಿಸ್ಟಿಕ್ಸ್ ಕಂಪನಿಗೆ ಮಾಹಿತಿ ನೀಡಲಾಗಿತ್ತು. ಮೊಹಮ್ಮದ್ ನಿಶಾಕ್ ಉರ್ವಾ ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಅತ್ಯಂತ ಚಾಣಾಕ್ಷ ರೀತಿಯಲ್ಲಿ ಆಗಿದ್ದ ಕಳ್ಳತನದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಆನಂತರ, ಅಮೆಜಾನ್ ಕಂಪನಿಯ ವಿಜಿಲೆನ್ಸ್ ಅಧಿಕಾರಿಗಳು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ ಇದೇ ಮಾದರಿಯ ಮೋಸ ದೇಶದ ಹಲವೆಡೆ ನಡೆದಿರುವುದಾಗಿ ತಿಳಿಸಿದ್ದರು. ದೇಶಾದ್ಯಂತ ಎರಡನೇ ಹಂತದ ನಗರಗಳನ್ನು ಕೇಂದ್ರೀಕರಿಸಿ ಈ ರೀತಿಯ ಮೋಸವಾಗಿದ್ದು, ಎಲ್ಲ ಕಡೆಯೂ ಪ್ರತ್ಯೇಕ ಮೊಬೈಲ್ ಸಿಮ್, ಬೇರೆ ಬೇರೆ ಹೆಸರುಗಳನ್ನು ಬಳಸಿದ್ದಾಗಿ ಮಾಹಿತಿ ನೀಡಿದ್ದರು. ಅ.4ರಂದು ಉರ್ವಾ ಠಾಣೆಯಲ್ಲಿ ಎಫ್ಐರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಸೇಲಂ, ತಿರುವನಂತಪುರಂ, ಜೈಪುರ, ಗಾಜಿಯಾಬಾದ್, ಮೈಸೂರು, ಗುವಾಹಟಿ ಸೇರಿದಂತೆ ದೇಶಾದ್ಯಂತ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿತ್ತು. ಈ ನಡುವೆ, ಸೇಲಂ ಪೊಲೀಸರು ಇದೇ ಮಾದರಿಯ ಪ್ರಕರಣದಲ್ಲಿ ರಾಜ್ ಕುಮಾರ್ ಮೀನಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿಯುತ್ತಲೇ ಉರ್ವಾ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದರು. ಮಂಗಳೂರಿನ ರೀತಿಯದ್ದೇ ಪ್ರಕರಣ ಎಂದು ತಿಳಿದು ಆತನನ್ನು ಬಾಡಿ ವಾರೆಂಟ್ ಪಡೆದು ಒಂದಷ್ಟು ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಜೊತೆಗಾರ ಸುಭಾಸ್ ಗುರ್ಜರ್ ರಾಜಸ್ಥಾನದಲ್ಲಿ ಇರುವುದು ತಿಳಿಯುತ್ತಲೇ ಅಲ್ಲಿಗೆ ತೆರಳಿದ್ದು, ಜೈಪುರದಲ್ಲಿ ಬಂಧನ ಮಾಡಿದ್ದಾರೆ.
ಇವರ ತಿಂಗಳ ವೆಚ್ಚ 14ರಿಂದ 18 ಲಕ್ಷ ಇದ್ದರೆ, ಆದಾಯ ಸುಮಾರು 50ರಿಂದ 60 ಲಕ್ಷ ಆಗಿತ್ತು ಎನ್ನುತ್ತಾರೆ ಪೊಲೀಸರು. ತಿಂಗಳಲ್ಲಿ ಕನಿಷ್ಠ 30 ಲಕ್ಷ ಲಾಭ ಮಾಡಿಕೊಳ್ಳುತ್ತಿದ್ದರು. ವಿಶೇಷ ಅಂದ್ರೆ, 2019ರಿಂದ ಈವರೆಗೆ ಬರೋಬ್ಬರಿ 30 ಕೋಟಿಯಷ್ಟು ದೊಡ್ಡ ಮೊತ್ತದ ಮೋಸದ ವಹಿವಾಟು ಮಾಡಿದ್ದಾರೆಂದು ಪೊಲೀಸರು ಅಂದಾಜಿಸಿದ್ದಾರೆ. ಇವರು ಎಷ್ಟು ಚಾಣಾಕ್ಷರಿದ್ದಾರೆ ಅಂದರೆ, ಕೇವಲ ಒಂದು ಆಂಡ್ರಾಯ್ಡ್ ಮೊಬೈಲ್ ಬಳಸಿಯೇ ಕರಾಮತ್ತು ತೋರಿಸುತ್ತಿದ್ದರು. ಬೇರೆ ಬೇರೆ ನಗರಗಳಲ್ಲಿ ಇರುವಂತೆ ತೋರಿಸಿ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ದೊಡ್ಡ ಮೌಲ್ಯದ ಸಾಮಗ್ರಿ ಸಿಗುತ್ತಿದ್ದಂತೆ ಅದನ್ನು ಓಎಲ್ಎಕ್ಸ್ ನಲ್ಲಿ ಹಾಕಿ ಸಿಕ್ಕಷ್ಟು ಮೊತ್ತಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ವಿಮಾನದಲ್ಲಿಯೇ ಓಡಾಡುತ್ತ ಐಷಾರಾಮಿ ಜೀವನ ನಡೆಸುತ್ತಿದ್ದರು. ನಕಲಿ ಸಿಮ್ ಮತ್ತು ನಕಲಿ ಹೆಸರುಗಳನ್ನು ಬಳಸಿಯೇ ದೋಖಾ ಮಾಡುತ್ತಿದ್ದರು. ಒಟ್ಟಿನಲ್ಲಿ ಅಮೆಜಾನ್ ಪಾಲಿಗೆ ಮೋಸ್ಟ್ ವಾಂಟೆಡ್ ಎನಿಸಿದ್ದ ಇಬ್ಬರು ಕಂತ್ರಿಗಳನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post