ಮಂಗಳೂರು, ಜ.2: ಗುರುಪುರ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಪರಿಣಾಮ 8 ಮಂದಿ ಗಾಯಗೊಂಡಿದ್ದಾರೆ. ಖಾಸಗಿ ಬಸ್ ಕಿನ್ನಿಗೋಳಿಯಿಂದ ಕೈಕಂಬ, ಪೊಳಲಿ ದ್ವಾರದ ಮೂಲಕ ಬಿಸಿ ರೋಡಿಗೆ ತೆರಳುತ್ತಿದ್ದಾಗ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ. ದ್ವಾರದ ಬಳಿಯಲ್ಲೇ ಇಳಿಜಾರಿನಲ್ಲಿ ಬ್ರೇಕ್ ಫೇಲ್ ಆಗಿದೆ ಎನ್ನಲಾಗುತ್ತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಹೊಂಡಕ್ಕೆ ಬೀಳುವುದು ತಪ್ಪಿದೆ. ರಸ್ತೆಯ ಬಲಬದಿಗೆ ಬಸ್ ಒರಗಿ ಬಿದ್ದಿದ್ದು ಬಸ್ಸಿನಲ್ಲಿ 30ರಿಂದ 40 ರಷ್ಟು ಪ್ರಯಾಣಿಕರು ಇದ್ದರು. ಹೀಗಾಗಿ ಕೆಲವರು ಗಾಯಗೊಂಡಿದ್ದು ಮಂಗಳೂರು ಸೇರಿದಂತೆ ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಪೊಳಲಿ ದ್ವಾರದ ಬಳಿಕ ಬಸ್ ಅಡ್ಡೂರಿನತ್ತ ಚಲಿಸುತ್ತಿದ್ದರೆ ಎಡಬದಿಯಲ್ಲಿ ಬೃಹತ್ ಪ್ರಪಾತ ಇದ್ದು ಅಲ್ಲಿ ಬ್ರೇಕ್ ಫೇಲ್ ಆಗುತ್ತಿದ್ದರೆ ದೊಡ್ಡ ದುರಂತ ಆಗಬಹುದಿತ್ತು. ಆದರೆ ದ್ವಾರ ದಾಟಿದ ಕೂಡಲೇ ಬ್ರೇಕ್ ಫೇಲ್ ಆಗಿದ್ದು ಚಾಲಕ ಸಮಯ ಪ್ರಜ್ಞೆಯಿಂದ ಬಲ ಬದಿಗೆ ಒಯ್ದು ಬಸ್ಸನ್ನು ನಿಧಾನಕ್ಕೆ ಪಲ್ಟಿಯಾಗುವಂತೆ ಮಾಡಿದ್ದಾರೆ. ಬಸ್ಸಿನ ಬಾಗಿಲಿನ ಭಾಗ ಅಡ್ಡಕ್ಕೆ ಬಿದ್ದ ಕಾರಣ ಪ್ರಯಾಣಿಕರು ಬಲಬದಿಯ ಕಿಟಕಿ ಹಾಗೂ ಎದುರಿನ ಹಾಗೂ ಹಿಂದಿನ ಕನ್ನಡಿ ಒಡೆದು ಹೊರಗೆ ಬಂದರು.
ಸ್ಥಳಕ್ಕೆ ಬಜಪೆ ಇನ್ಸ್ಪೆಕ್ಟರ್ ಸಂದೀಪ್ ಹಾಗೂ ಸಿಬಂದಿ ಆಗಮಿಸಿದ್ದು, ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾದರು. ಈ ಘಟನೆಯಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಪೊಳಲಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು . ಕ್ರೇನ್ ಮೂಲಕ ಬಸ್ ಅನ್ನು ಪಕ್ಕಕ್ಕೆ ಸರಿಸಲಾಯಿತು. ರಸ್ತೆಯ ಎಡಬದಿಯಲ್ಲಿ ದೊಡ್ಡ ಕಂದಕ ಇರುವ ಕಾರಣ ಒಂದು ವೇಳೆ ಬಸ್ ಆ ಕಡೆಗೆ ಬಿದ್ದಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆಯಿತ್ತು.
Discussion about this post