ಮೂಡುಬಿದಿರೆ: ಕ್ರೀಡೆಯಿಂದ ಸದೃಢ ಆರೋಗ್ಯದ ಜತೆಗೆ ಉದ್ಯೋಗ ಪಡೆಯಲೂ ಸಹಾಯವಾಗುತ್ತದೆ. ಕೋವಿಡ್ ಕಾರಣಕ್ಕೆ ಎರಡು ವರ್ಷ ದೇಶದಲ್ಲಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಮತ್ತೆ ಆರಂಭಗೊಂಡಿದೆ ಎಂದು ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಆಫ್ ಏಷ್ಯಾದ ಜನರಲ್ ಸೆಕ್ರೆಟರಿ ರಾಜರಾವ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕದ ಆಶ್ರಯದಲ್ಲಿ ಮಾ.6 ರವರೆಗೆ ನಡೆಯಲಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಪ್ರತಿ ಆಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಕೊನೆಯವರೆಗೆ ತೊಡಗಿಸಿಕೊಂಡಾಗ ಗೆಲುವು ಖಚಿತ. ಆಳ್ವಾಸ್ ಸಂಸ್ಥೆಯು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಆಳ್ವಾಸ್ ನೀಡುವ ಕೊಡುಗೆಯಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ದೇಶ –ವಿದೇಶಗಳಲ್ಲಿ ಹೆಸರು ಪಡೆದಿದ್ದಾರೆ’ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ‘ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ 17ನೇ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಂಗಳೂರು ವಿಶ್ವವಿದ್ಯಾಲಯ ತಂಡದಲ್ಲಿರುವ ಒಂಭತ್ತು ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳೇ ಆಗಿರುವುದು ಇಲ್ಲಿನ ಕ್ರೀಡಾ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದರು. ಟ್ರಸ್ಟಿ ವಿವೇಕ್ ಆಳ್ವ, ಕ್ರೀಡಾ ಇಲಾಖೆಯ ಪ್ರದೀಪ್ ಡಿಸೋಜ, ಬಾಲ್ ಬ್ಯಾಡ್ಮಿಂಟನ್ ಫೆಡರೇಶನ್ ರಾಜ್ಯ ಕಾರ್ಯದರ್ಶಿ ದಿನೇಶ್, ಜಿಲ್ಲಾ ಘಟಕ ಅಧ್ಯಕ್ಷ ಮಹ್ಮದ್ ಇಲಿಯಾಸ್, ಅಸೋಸಿಯೇಷನ್ ಮಾಜಿ ಜನರಲ್ ಸೆಕ್ರೆಟರಿ ಎಚ್. ಚಂದ್ರಶೇಖರ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ಜಯಮ್ಮ ಶಾಸ್ತ್ರಿ ಇದ್ದರು.