ಮಂಗಳೂರು: ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್, ಗುರುವಾರ ಸುರಕ್ಷಿತವಾಗಿ ನಗರಕ್ಕೆ ಬಂದಿಳಿದಿದ್ದಾರೆ.
ಈ ವೇಳೆ ಮಾತನಾಡಿದ ಅನುಷಾ, ಏಜೆಂಟ್ ಗಳ ಮುಖಾಂತರ ಪಾಸ್ ಪಡೆದುಕೊಂಡು ನಾವಿದ್ದ ಸ್ಥಳದಿಂದ ಉಕ್ರೇನ್ ಗಡಿ ದಾಟಿದೆವು. ಆದರೆ ನಾವು ತಲುಪಿದ ಗಡಿ ಯಾವುದು ಎಂಬ ಅರಿವು ನಮಗಿರಲಿಲ್ಲ. ರೊಮೇನಿಯಾ ಗಡಿ ದಾಟಿದ ಬಳಿಕ ಕೆಲ ಕಾಲ ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಅಲ್ಲಿ ಯುಕ್ರೇನ್ ನ ಸೇನಾ ಅಧಿಕಾರಿಗಳಿದ್ದರು. ರೊಮೇನಿಯಾ ಗಡಿಯಲ್ಲಿ ವಲಸೆ ಕಚೇರಿ ತಲುಪಿದ ಮೇಲೆ ನಮ್ಮನ್ನು ಆಶ್ರಯತಾಣವೊಂದಕ್ಕೆ ಕರೆದೊಯ್ಯಲಾಯಿತು. ಭಾರತ ಸರಕಾರ ಅಲ್ಲಿ ತಂಗಲು ನಮಗೆ ವ್ಯವಸ್ಥೆ ಮಾಡಿತ್ತು. ಬಳಿಕ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಕರೆ ತರಲಾಗಿದ್ದು, ಅಲ್ಲಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇನೆ ಎಂದು ತಿಳಿಸಿದರು.
ತಾಯಿ ವಿದ್ಯಾ ಭಟ್ ಹಾಗೂ ತಂದೆ ಹರೀಶ್ಚಂದ್ರ ಭಟ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಮಗಳನ್ನು ಬರಮಾಡಿಕೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಕೂಡ ವಿಮಾನ ನಿಲ್ದಾಣದಲ್ಲಿ ಅನುಷಾ ಅವರನ್ನು ಸ್ವಾಗತಿಸಿದರು.