ಮಂಗಳೂರು : ಈ ಬಾರಿಯ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ ಟೂರ್ನಿ 2025 ಇಟಲಿಯಲ್ಲಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಮಂಗಳೂರಿನ ಸೌಮ್ಯಾ ದೇವಾಡಿಗ ಫ್ಲೋರ್ ಬಾಲ್ ತರಬೇತುದಾರೆಯಾಗಿ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ತರಬೇತುದಾರೆ ಎಂಬುದು ಹೆಮ್ಮೆಯ ವಿಚಾರ.
ಲಯನ್ಸ್ ವಿಶೇಷ ಶಾಲೆಯ ಶಿಕ್ಷಕಿ ಸೌಮ್ಯಾ ದೇವಾಡಿಗ ಅವರು ಕಬ್ಬಡ್ಡಿ ಆಟಗಾರ್ತಿ. ಲಯನ್ಸ್ ವಿಶೇಷ ಶಾಲೆಗೆ ಬಂದ ಬಳಿಕ ಅವರು ಫ್ಲೋರ್ ಬಾಲ್ ಅನ್ನು ಅಭ್ಯಾಸ ಮಾಡಿ ವಿಶೇಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಫ್ಲೋರ್ ಬಾಲ್ ವಿಶೇಷ ಮಕ್ಕಳಿಗಾಗಿ ಇರುವ ಆಟ. ನೋಡಲು ಹಾಕಿ ತರಹ ಇರುತ್ತದೆ. ಆದರೆ, ಇದರ ಸ್ಟಿಕ್‌ನಲ್ಲಿ ಬಾಲ್ ಹೊಡೆಯುವಲ್ಲಿ ಪ್ಲಾಸ್ಟಿಕ್ ಅಳವಡಿಸಲಾಗುತ್ತದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯಾ ದೇವಾಡಿಗ ಅವರು, ನಾನು ಲಯನ್ಸ್ ವಿಶೇಷ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತೇನೆ. ನಾನು 8 ವರ್ಷಗಳಿಂದ ವಿಶೇಷ ಒಲಿಂಪಿಕ್ಸ್‌ನಲ್ಲಿ ಇದ್ದೇನೆ. 2018ರಲ್ಲಿ ನಾನು ಕರ್ನಾಟಕದ ಪರವಾಗಿ ಕೇರಳಕ್ಕೆ ಫ್ಲೋರ್ ಹಾಕಿ ತರಬೇತಿದಾರೆಯಾಗಿ ಹೋಗಿದ್ದೆ. ನಾನು 8 ಮಕ್ಕಳನ್ನು ಕೇರಳಕ್ಕೆ ಕರೆದುಕೊಂಡು ಹೋದೆ. ಅಲ್ಲಿ ನನ್ನನ್ನು ಕರ್ನಾಟಕಕ್ಕೆ ಮುಖ್ಯ ತರಬೇತಿದಾರೆಯಾಗಿ ಆಯ್ಕೆ ಮಾಡಲಾಯಿತು.
ಅದು ಫ್ಲೋರ್ ಹಾಕಿ. ಅಲ್ಲಿ ನಾನು ಬೆಳ್ಳಿ ಪದಕ ಗೆದ್ದೆ. ನನ್ನನ್ನು ಕರ್ನಾಟಕಕ್ಕೆ ಮುಖ್ಯ ತರಬೇತಿದಾರೆಯನ್ನಾಗಿ ಆಯ್ಕೆ ಮಾಡಲಾಯಿತು. 14 ರಾಜ್ಯಗಳಿಂದ 17 ತರಬೇತಿದಾರರು ಇದ್ದರು. 26 ಮಕ್ಕಳನ್ನು ಆಯ್ಕೆ ಮಾಡಲಾಯಿತು. ನನ್ನನ್ನು ಅತ್ಯುತ್ತಮ ಕೋಚ್ ಎಂದು ಆಯ್ಕೆ ಮಾಡಿದರು. ಕರ್ನಾಟಕಕ್ಕೆ ನನ್ನನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿ ನನ್ನನ್ನು ಮತ್ತು ಹಿಮಾಚಲ ಪ್ರದೇಶದ ಇಬ್ಬರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಯಿತು. ಇದೇ ಮೊದಲ ಬಾರಿ, ನಾನು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೋಗುತ್ತಿದ್ದೇನೆ ಎಂದರು.
ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ ಟೂರ್ನಿ 2025 ಆಯ್ಕೆಗೆ ನಾಲ್ಕೈದು ಹಂತದ ಪರೀಕ್ಷೆ ನಡೆದ ಬಳಿಕ ಸೌಮ್ಯಾ ದೇವಾಡಿಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಲೋರ್ ಬಾಲ್ ತರಬೇತಿದಾರೆಯಾಗಿ ಆಯ್ಕೆಯಾಗಿದ್ದಾರೆ. ಇಟಲಿಯಲ್ಲಿ ಮಾರ್ಚ್ 8-15ರವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ 102ದೇಶಗಳ 1,500 ಕ್ರೀಡಾಪಟುಗಳು, 1000 ತರಬೇತಿದಾರರು ಭಾಗವಹಿಸಲಿದ್ದಾರೆ. ಅವರಲ್ಲಿ ಸೌಮ್ಯಾ ದೇವಾಡಿಗರೂ ಒಬ್ಬರು.
Discover more from Coastal Times Kannada
Subscribe to get the latest posts sent to your email.
Discussion about this post