ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಿನ್ನೆ ಸಂಜೆ (ಬುಧವಾರ) ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದಕ್ಕೂ ಮುನ್ನ, ಭವ್ಯ ಮೆರವಣಿಗೆಯಲ್ಲಿ ನೂತನ ವಧು-ವರರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಆಗಮಿಸಿದರು. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ನಟ ದರ್ಶನ್ ತೂಗುದೀಪ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ನವ ಜೋಡಿಗಳಿಗೆ ಮಂಗಳಸೂತ್ರ ವಿತರಿಸಿದರು. ವೇದ, ಮಂತ್ರ ಘೋಷ ಪಠಣದೊಂದಿಗೆ ವಧು-ವರರಿಗೆ ಮಂಗಳಸೂತ್ರ ಧಾರಣೆ ಮಾಡಿ, ಆಯಾ ಜಾತಿಯ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು. ಕೇರಳದಿಂದ 6, ಆಂಧ್ರ ಪ್ರದೇಶದ ಇಬ್ಬರು ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.
ಕನ್ನಡದ ಚಲನಚಿತ್ರ ನಟ ದರ್ಶನ್ ತೂಗುದೀಪ್ ಮಾತನಾಡಿ, ಧರ್ಮಸ್ಥಳವೆಂಬ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ನನ್ನ ವಿವಾಹವೂ ನೆರವೇರಿತ್ತು. ಹೆಗ್ಗಡೆಯವರ ಆಶೀರ್ವಾದ ದಿಂದ ಇಂದು ಹಂತಕ್ಕೇರಿದ್ದೇನೆ ಎಂದರು. ನೂತನ ದಂಪತಿಗಳು ಪರಸ್ಪರ ಅರಿತುಕೊಂಡು, ಗೌರವಿಸಿ ಬಾಳಿ ಎಂದರು.

“ದಾಂಪತ್ಯಕ್ಕೆ ಕಾಲಿಟ್ಟ ಗೃಹಿಣಿ ಭಾಗ್ಯಲಕ್ಷ್ಮಿಯಾಗಿ ಮನೆ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟಗಳನ್ನು ಸಮನಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು” ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.


ವಿಶೇಷ ಜೋಡಿ : 1972ರಿಂದ ಈವರೆಗೆ ನಡೆದ ವಿವಾಹದಲ್ಲಿ 12,777ನೇ ಜೋಡಿ ಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ ಬಂಟ್ವಾಳ ತಾಲೂಕು ನೋಡೆಲ್ ಅಧಿಕಾರಿಯಾಗಿರುವ ಪ್ರಸಾದ್ ಮತ್ತು ಕೋಲಾರದಲ್ಲಿ ಜ್ಞಾನ ವಿಕಾಸದ ಸಮನ್ವಯಧಿಕಾರಿ ಅಶ್ವಿನಿ ಎಸ್. ದಂಪತಿಯನ್ನು ವಿಶೇಷವಾಗಿ ಗೌರವಿಸಲಾಯಿತು.
52 ಅಂತರ್ಜಾತಿ ಜೋಡಿ : ಹೊರರಾಜ್ಯಗಳಾದ ಕೇರಳ 3, ಆಂಧ್ರಪ್ರದೇಶದ 1 ಜೋಡಿ ವಿವಾಹವಾದರು. ದ.ಕ. ಜಿಲ್ಲೆಯ ಬೆಳ್ತಂಗಡಿ 5, ಪುತ್ತೂರು-6, ಮಂಗಳೂರು-5, ಉಡುಪಿ ಜಿಲ್ಲೆಯಿಂದ ಅತೀ ಹೆಚ್ಚು 24, ಉತ್ತರ ಕನ್ನಡ 17, ಶಿವಮೊಗ್ಗ 16, ಚಿಕ್ಕಮಗಳೂರಿನ 14, ಮೈಸೂರು 13, ಹಾಸನ 11, ಬೆಂಗಳೂರು 10, ತುಮಕೂರು 10 ಅತೀ ಹೆಚ್ಚು ಜೋಡಿ ಸೇರಿ ರಾಜ್ಯದ 22 ಜಿಲ್ಲೆಗಳಿಂದ ಬಂದಿದ್ದು, ಇದರಲ್ಲೂ 52 ಜೋಡಿಗಳು ಅಂತರ್ಜಾತಿ ವಿವಾಹವಾಗಿದ್ದಾರೆ. ಪರಿಶಿಷ್ಟ ಜಾತಿಯ 52 ಜೋಡಿ ಸೇರಿ ಒಟ್ಟು 37 ಸಮುದಾಯದ 201 ಜೋಡಿಗಳ ವಿವಾಹಕ್ಕೆ ಕ್ಷೇತ್ರ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಶ್ರದ್ಧಾ ಅಮಿತ್, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ದಿವ್ಯ ಕುಮಾರಿ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post