ಬೆಂಗಳೂರು: ಹೊಸ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನಿಷ್ಠಾವಂತರನ್ನು ಸಂಪುಟಕ್ಕೆ ಸೇರಿಸುವ ಕುರಿತು ಕಳೆದ ಕೆಲವು ದಿನಗಳಿಂದ ತೆರೆಮರೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ಮೊದಲ ಸುತ್ತಿನಲ್ಲಿ ಕೆಲವೇ ಕೆಲವು ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ, ಯಡಿಯೂರಪ್ಪ ಕ್ಯಾಂಪ್ ನ ಹಲವರಿಗೆ ಮಹತ್ವದ ಖಾತೆಗಳು ದೊರೆಯಲಿದೆ ಎಂದು ತಿಳಿದು ಬಂದಿದೆ,
ಮಾಜಿ ಮುಖ್ಯಮಂತ್ರಿಗೆ ಮತ್ತು ಲಿಂಗಾಯತ ಲಾಬಿಗೆ ಪಕ್ಷವು ಮಣಿದು ಗೌರವ ತೋರುತ್ತಿದೆ, ಮಂಗಳವಾರ ತಡರಾತ್ರಿ ಕೆಲ ಸಚಿವರಿಗೆ ಕರೆ ಬಂದಿದೆ, ಕೆಲವೇ ಮಂದಿಗೆ ಸಚಿವ ಭಾಗ್ಯ ದೊರೆಯಲಿದ್ದು ಮತ್ತೊಂದು ಸುತ್ತಿನ ವಿಸ್ತರಣೆಗಾಗಿ ಕೆಲವು ಖಾತೆಗಳನ್ನು ಉಳಿಸಿಕೊಳ್ಳಲಿದ್ದಾರೆ.
ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಬೆಂಬಲಿಗರು ಮತ್ತು ಬಿಎಸ್ ವೈ ಕಿರಿಯ ಪುತ್ರ ವಿಜಯೇಂದ್ರ ಅವರಿಗೆ ಸೂಕ್ತಸ್ಥಾನ ಕೊಡಲು ನಿರ್ಧರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಪೂರ್ಣ ಪ್ರಮಾಣದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಹೈಕಮಾಂಡ್ ಇಚ್ಚೆಯಾಗಿದೆ.