ಮಂಗಳೂರು: ಕುಲಶೇಖರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ‘ಒಂದು ಕಾಲದಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಬೆಸೆದುಕೊಂಡಿದ್ದ ಕುಲಶೇಖರ ಕೆರೆಯು ಇಂದು ಜೀರ್ಣಾವಸ್ಥೆ ಯಲ್ಲಿದೆ. ಹಿಂದೆ ಸಮೀಪದ ವೀರ ನಾರಾಯಣ ದೇವಸ್ಥಾನದ ದೇವರು ಜಳಕಕ್ಕೆ ಈ ಕೆರೆಗೆ ಬರುವ ಸಂಪ್ರದಾಯವಿತ್ತು ಎಂದು ಹಿರಿಯರು ಹೇಳುತ್ತಾರೆ. ಸುಮಾರು 60 ವರ್ಷಗಳಿಂದ ಪಾಳು ಬಿದ್ದು ಜೀರ್ಣಾವಸ್ಥೆ ತಲುಪಿದ್ದು, ಅಭಿವೃದ್ಧಿಪಡಿಸುವ ಚಿಂತನೆಯೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ನಗರದಲ್ಲಿ ಅನೇಕ ಕೆರೆಗಳು ನಾಶವಾಗಿ ಹೋಗಿದ್ದು, ಕೆರೆಗಳ ಪುನರುಜ್ಜೀವನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ವಿವಿಧ ಕೆರೆಗಳ ಅಭಿವೃದ್ಧಿಗೆ ಶಾಸಕ ಕಾಮತ್ ಅವರು ಕೇಳಿಕೊಂಡ ಪ್ರಕಾರ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದರು.
ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯಿಲಿ, ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಅನಿಲ್ ರಾವ್, ಅಶ್ವಿನ್ ಪೂಜಾರಿ, ಸುಶಾಂತ್ ಕೋಟಿಮುರ, ವಿಶ್ವಜೀತ್, ಯೋಗೀಶ್ ಚೌಕಿ, ಸಂದೀಪ್ ಮೇಲ್ತೋಟ, ನಾಗರಾಜ ಮಂಗಳ ನಗರ, ಎ.ಪಿ ಪ್ರಭು, ರಾಜೀವ್, ದಿನೇಶ್, ಯೋಗೀಶ್ ಆಚಾರ್ಯ, ಯಶವಂತ ಡೈರಿ, ಗಣೇಶ್ ಆಚಾರ್ಯ, ಅರುಣ್ ರಾವ್, ವಸಂತ್ ಜೆ ಪೂಜಾರಿ ಇದ್ದರು.