ಅಬುಧಾಬಿ: ಯುಎಇ ಉಪ ಪ್ರಧಾನಿ ಹಾಗೂ ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇಂದು (ಶನಿವಾರ) ಅಬುಧಾಬಿ ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್‌ನ ಧೈರ್ಯ, ಸಾಹಸ ಮತ್ತು ಜವಾಬ್ದಾರಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಶೇಖ್ ಹಮ್ದಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅತ್ಯುನ್ನತ ಮಟ್ಟದ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಬಣ್ಣಿಸಿದ್ದು, ಯುಎಇ ನಾಯಕತ್ವದ ಪರವಾಗಿ ಭಾರತೀಯ ಪೈಲಟ್‌ಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
” ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಭೇಟಿಯಾದ ಕ್ಷಣಗಳು. ಮಾನವ ಜೀವಗಳ ಮೇಲಿನ ಕಾಳಜಿ, ಜವಾಬ್ದಾರಿ ಮತ್ತು ಅತ್ಯುನ್ನತ ಧೈರ್ಯ ಪ್ರದರ್ಶಿಸಿದ ಪೈಲಟ್ ಇವರಾಗಿದ್ದಾರೆ. ನಮ್ಮ ಮತ್ತು ದೇಶದ ಪರವಾಗಿ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಪ್ರಶಂಸೆ ಇದೆ. ಅವರು ನಮ್ಮ ತಂಡ, ನಮ್ಮ ರಾಷ್ಟ್ರದ ಯಶೋಗಾಥೆ, ಯುಎಇ ಪ್ರತಿನಿಧಿಸುವ ಕರುಣೆ, ಶಾಂತಿ, ಜೀವದ ರಾಷ್ಟ್ರದ ಮೌಲ್ಯಗಳ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಶೇಖ್ ಹಮ್ದಾನ್ ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಸಹ ಪೈಲಟ್ ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚರ್ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ. ನಾವು ಅವರ ಕುಟುಂಬ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಮಚ್ಚರ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಬಲ ನೀಡಿದ್ದಕ್ಕೆ ಯುಎಇ ಸರ್ಕಾರಕ್ಕೆ ರಾಯಭಾರ ಕಚೇರಿ ಇದೇ ವೇಳೆ ಧನ್ಯವಾದ ಅರ್ಪಿಸಿದೆ.
ಉಗ್ರ ಕೃತ್ಯಕ್ಕೆ ಯತ್ನಿಸಿದ್ದ ಒಮಾನ್ ಪೈಲಟ್: ಸಹ ಪೈಲಟ್ ಆಗಿದ್ದ ಒಮಾನ್ನ ಹಮಾಮ್ ಅಲ್ ಹಮ್ಮಾಮಿ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸಿದ್ದಾಗಿ ಘಟನೆಯ ತನಿಖೆ ನಡೆಸುತ್ತಿರುವ ಯುಎಇ ತಿಳಿಸಿದೆ. ತುರ್ತು ಬಳಕೆಗಾಗಿ ಇದ್ದ ಕೊಡಲಿಯನ್ನು ಕ್ಯಾಪ್ಟನ್ ಸ್ಮಿತ್ ಅವರ ಹಲ್ಲೆಗೆ ಬಳಸಿ, ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆತ ಬಯಸಿದ್ದ ಎಂದು ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ತಿಳಿಸಿದ್ದಾರೆ.
ಆದರೆ, ತೀವ್ರ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಅಪ್ರತಿಮ ಧೈರ್ಯವಂತ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸಹ ಪೈಲಟ್ ಅನ್ನು ಹಿಡಿಯಲು ಸಾಧ್ಯವಾಗಿದೆ ಎಂದು ವರದಿಗಳು ತಿಳಿಸಿವೆ.
ಪೈಲಟ್ಗಳ ಹೊಡೆದಾಟದಿಂದ 174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ತುರ್ತು ಸಂಕೇತಗಳನ್ನು ರವಾನಿಸಿ, 34 ಸಾವಿರ ಅಡಿ ಎತ್ತರದಿಂದ 17 ಸಾವಿರ ಅಡಿಗಿಂತಲೂ ಕೆಳಕ್ಕೆ ಇಳಿದು ಕೊನೆಗೆ ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಗಿತ್ತು.
https://x.com/HamdanMohammed/status/2106338248398446970?s=20
Discover more from Coastal Times Kannada
Subscribe to get the latest posts sent to your email.







Discussion about this post