ಮಂಗಳೂರು: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗದೆ ಆಡಳಿತದ ವಿರುದ್ಧ ಬೆರಳು ತೋರಿಸಿಕೊಂಡು ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಭಾರತದಲ್ಲಿ ಮುಸ್ಲಿಮರು ಸದ್ಯ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇತರ ಅಲ್ಪಸಂಖ್ಯಾತ ಸಮುದಾಯದವರ ಜೊತೆ ಕೈಜೋಡಿಸಬೇಕು. ಅದಕ್ಕೆ ಮುಸ್ಲಿಮರೇ ನೇತೃತ್ವ ವಹಿಸಬೇಕು ಎಂದು ವಕೀಲ ಮುಜಫರ್ ಅಹಮ್ಮದ್ ಸಲಹೆ ನೀಡಿದರು.

ಕಂಕನಾಡಿಯ ಜಮಿಯತ್ ಉಲ್ ಫಲಾಹ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜಸ್ಟಿಸ್ ಫೋರಂ ಆಯೋಜಿಸಿದ್ದ ಮುಸ್ಲಿಂ ಏಕತಾ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಮುಸ್ಲಿಮರು ಯಾವುದೇ ಸಂಘಟನೆ ಅಥವಾ ಪಕ್ಷದ ಗುಲಾಮರಾಗದೆ ಸುಶಿಕ್ಷಿತರಾಗಿ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಮಸೀದಿ ಮತ್ತು ಮದ್ರಸಾಗಳು ಪ್ರಾರ್ಥನೆ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಚಿಂತನಾಗೋಷ್ಠಿಗಳು ನಡೆಯುವ ಸ್ಥಳಗಳಾಗಬೇಕು ಎಂದರು.
‘ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮುಸ್ಲಿಮರು ಅಧೋಗತಿಯತ್ತ ಸಾಗುತ್ತಿದ್ದಾರೆ. ನಮ್ಮವರು ಸಮಸ್ಯೆ ಹೇಳುತ್ತ ಕುಳಿತುಕೊಳ್ಳುವುದರಲ್ಲಿ ಮುಂದಿದ್ದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಸಮುದಾಯವು ಹತ್ತು ಹಲವು ಸಂಘಟನೆಗಳಲ್ಲಿ ಹಂಚಿಹೋಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಯಾವುದೇ ಆಶಯದ ಹಿನ್ನೆಲೆಯವರಾಗಿರಲಿ, ಯಾವುದೇ ಗುಂಪಿಗೆ ಸೇರಿದವರು ಆಗಿರಲಿ ಎಲ್ಲರೂ ಭಾರತೀಯರು, ಸಹೋದರರು ಎಂದು ತಿಳಿದು ಪರಸ್ಪರ ಸಹಕಾರ ಮನೋಭಾವದಿಂದ ಬಾಳಬೇಕು’ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಹನೀಫ್ ಖಾನ್ ಕೊಡಾಜೆ, ಹನೀಫ್ ಹಾಜಿ ಗೋಳ್ತಮಜಲು, ಮಾಜಿ ಮೇಯರ್ ಕೆ.ಅಶ್ರಫ್, ಮುಸ್ತಫ ಕೆಂಪಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ, ಎಂ.ಎಸ್.ಮುಹಮ್ಮದ್, ಯಾಸೀನ್ ಕುದ್ರೋಳಿ, ಇಸ್ಮಾಯೀಲ್ ಉಳ್ಳಾಲ ಮತ್ತಿತರರು ಭಾಗವಹಿಸಿದ್ದರು. ಎಂಜೆಎಫ್ ಉಪಾಧ್ಯಕ್ಷ ಅಲಿ ಹಸನ್ ಸ್ವಾಗತಿಸಿದರು. ಸೈಫುದ್ದೀನ್ ಕುದ್ರೋಳಿ ಕಿರಾಅತ್ ಪಠಿಸಿದರು. ಪ್ರ.ಕಾರ್ಯದರ್ಶಿ ವಹಾಬ್ ಕುದ್ರೋಳಿ ವಂದಿಸಿದರು. ಕಾರ್ಯದರ್ಶಿ ಅಬ್ದುಸ್ಸಲಾಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

Discover more from Coastal Times Kannada
Subscribe to get the latest posts sent to your email.







Discussion about this post