ಮಂಗಳೂರು: ಹನ್ನೆರಡರ ಹರೆಯದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ಬಾಲಕ ಕಮಲ್ ಹಸನ್(12) ಇದೀಗ ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಎರಡು ಗಂಟೆಗಳ ಶಸ್ತ್ರಚಿಕಿತ್ಸೆ: ಅಸ್ಸಾಂ ಮೂಲದ ಬಾಲಕ ಕಮಲ್ ಹುಸೇನ್(12)ನ ಹೆತ್ತವರು ಮಡಿಕೇರಿಯ ಮನೆಯಲ್ಲಿ ಕಾರ್ಮಿಕ ರಾಗಿದ್ದರು. ಅವರು ಶನಿವಾರ ತೋಟ ದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕ ಪಕ್ಕದಲ್ಲಿ ಆಟವಾಡುತ್ತಿದ್ದ. ಈ ವೇಳೆ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದಿದೆ. ಅದರ ಒಂದು ಭಾಗ ಬಾಲಕನ ಕುತ್ತಿಗೆಯ ಮೂಲಕ ಎದೆಯ ಒಳಗಡೆ ಪ್ರವೇಶಿಸಿದೆ. ಈ ವೇಳೆ ಬಾಲಕನ ಕೊರಳಲ್ಲಿದ್ದ ಚೈನ್ ಕೂಡ ಕೊಂಬೆಗೆ ಸುತ್ತಿ ಒಳಗೆ ಸೇರಿದೆ. ಕೂಡಲೇ ಆತನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಮಂಗಳೂರಿಗೆ ಕರೆತರಲಾಯಿತು.
ಫೆ.8ರಂದು ಸಂಜೆ ಸುಮಾರು 7.30ಕ್ಕೆ ಘಟನೆ ನಡೆದಿದ್ದು, ರಾತ್ರಿ 12.15ಕ್ಕೆ ವೆನ್ಲಾಕ್ ತಲುಪಿದ್ದರು. ರಾತ್ರಿ 1.30ರಿಂದ 3.30ರ ವರೆಗೆ ಡಾ| ಸುರೇಶ್ ಪೈ ಅವರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಬಾಲಕ ಮಾತನಾಡುತ್ತಿದ್ದು, ಚೇತರಿಸುತ್ತಿದ್ದಾನೆ. “ತೆಂಗಿನ ಗರಿ ಬಿದ್ದು ಬಾಲಕನ ಕುತ್ತಿಗೆಯಿಂದ ನುಗ್ಗಿ ಎದೆಯ ಒಳಗಡೆ ಹೋಗಿತ್ತು. ಅದೃಷ್ಟವಶಾತ್ ಎದೆಯ ಒಳಗಿನ ಯಾವುದೇ ಭಾಗಕ್ಕೆ ಗಾಯಗಳಾಗಿರ ಲಿಲ್ಲ. ಬಾಲಕನಿಗೆ ರಕ್ತಸ್ರಾವ ಆಗುತ್ತಿರ ಲಿಲ್ಲ. ರಕ್ತನಾಳ, ನರ, ಶ್ವಾಸಕೋಶ, ಹೃದಯಕ್ಕೆ ತೊಂದರೆಯಾಗದ ರೀತಿಯಲ್ಲಿ ತೆಂಗಿನ ಮರದ ಗರಿಯ ತುಂಡನ್ನು ಯಶಸ್ವಿಯಾಗಿ ತೆಗೆದಿದ್ದೇವೆ. ಬಾಲಕ ಚೇತರಿಸುತ್ತಿದ್ದು, ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.
ಬಾಲಕನ ಕುಟುಂಬ ಸದಸ್ಯ ತಸರ್ ಅಲಿ ಪ್ರತಿಕ್ರಿಯಿಸಿ, “ಬಾಲಕ ಆಡುತ್ತಿದ್ದಾಗ ಘಟನೆ ಸಂಭವಿಸಿದೆ. ಮೂರು ವರ್ಷಗಳಿಂದ ಮಡಿಕೇರಿ ಬಳಿ ಕೆಲಸ ನಿರ್ವಹಿಸುತ್ತಿದ್ದೇವೆ. ಈ ಘಟನೆ ಸಂಭವಿಸಿದ ಕೂಡಲೇ ಮನೆ ಮಾಲಕರ ವಾಹನದಲ್ಲೇ ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ದೆವು. ಹೆಚ್ಚಿನ ಚಿಕಿತ್ಸೆಗೆ ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆಬಂದೆವು. ಇಲ್ಲಿನ ವೈದ್ಯರು ಉತ್ತಮವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ| ಶಿವಪ್ರಕಾಶ್ ಡಿ.ಎಸ್. ಮಾತನಾಡಿ, ಇದೊಂದು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾ ಗಿತ್ತು. ರೋಗಿ ಬಂದ ಕೂಡಲೇ ತ್ವರಿತವಾಗಿ ಸ್ಪಂದಿಸಿದೆವು. ವೆನ್ಲಾಕ್‌ನ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕ್ಯಾಲರ್ ಸರ್ಜರಿ (ಸಿಟಿವಿಎಸ್) ವಿಭಾಗದ ವೈದ್ಯರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post