ಮಂಗಳೂರು: ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಮೂಲದ ಕಂಟೈನರ್ ಹಡಗು (ಎಂವಿ ವಾನ್ ಹೈ 503) ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಸಂಚರಿಸುತ್ತಿದ್ದಾಗ ಸೋಮವಾರ ಬೆಳಗ್ಗೆ ಹಡಗಿನಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹತ್ತಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೌಕಾಪಡೆ 18 ಜನರನ್ನು ರಕ್ಷಿಸಿದೆ, 4 ಜನ ಕಾಣೆಯಾಗಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಶೋಧ ಕಾರ್ಯ ನಡೆಸುತ್ತಿದೆ.
ಕೊಲಂಬೋದಿಂದ ಹಡಗು ಹೊರಟಿದ್ದಾಗ ಒಟ್ಟು 22 ಸಿಬಂದಿ ಇದ್ದರು. ಎಂಟು ಚೈನಾ, ನಾಲ್ಕು ತೈವಾನ್, ನಾಲ್ಕು ಮ್ಯಾನ್ಮಾರ್, ಇಬ್ಬರು ಇಂಡೋನೇಶ್ಯಾ ಮೂಲದವರು ಇದ್ದರು. ಈಗ 18 ಸಿಬಂದಿಯನ್ನು ರಕ್ಷಣೆ ಮಾಡಲಾಗಿದ್ದು ನಾಲ್ಕು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಅವರ ರಕ್ಷಣೆಗಾಗಿ ಹುಡುಕಾಟ ಮುಂದುವರಿದಿದೆ. ಮಂಗಳೂರು ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ರಾಜದೂತ್, ಕೊಚ್ಚಿಯ ಐಸಿಜಿಎಸ್ ಅರ್ನ್ವೇಶ್, ಅಗತ್ತಿಯ ಐಸಿಜಿಎಸ್ ಸಾಚೆಟ್ ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ನಾಪತ್ತೆಯಾದವರಲ್ಲಿ ಇಬ್ಬರು ತೈವಾನ್, ಒಬ್ಬ ಇಂಡೋನೇಶ್ಯಾ ಮತ್ತು ಇನ್ನೊಬ್ಬ ಮ್ಯಾನ್ಮಾರ್ ಮೂಲದವರು ಇದ್ದಾರೆ. ಹಡಗಿನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಜೂನ್ 7ರಂದು ಕೊಲಂಬೊದಿಂದ ಹೊರಟಿದ್ದ ಈ ಹಡಗು ಜೂನ್ 10ರಂದು ಮುಂಬೈಗೆ ತಲುಪುವ ನಿರೀಕ್ಷೆ ಇತ್ತು. ಹಡಗಿನಲ್ಲಿ ಭಾರೀ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post