ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಅಧಿಕಾರ ತೆಗೆದುಕೊಂಡ ಬಳಿಕ, ಕಾಂಗ್ರೆಸ್ ಸರ್ಕಾರವೇ ಪೊಲೀಸರ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿದರು. ಸುಹಾಸ್ ಶೆಟ್ಟಿ ಹತ್ಯೆ ಅನಂತರದ ಬೆಳವಣಿಗೆ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲಿಸಿದ್ದೇವೆ. ಹಿಂದೂ ಕಾರ್ಯಕರ್ತರ ಜತೆ ಸಮಾ ಲೋಚನೆ ಮಾಡಿದ್ದೇವೆ. ಬಳಿಕ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಸಭೆ ನಡೆಸಿದ್ದೇವೆ. ಕಾನೂನು ಸುವ್ಯವಸ್ಥೆ ನೆಪದಲ್ಲಿ ಪೊಲೀಸರು ಮಧ್ಯರಾತ್ರಿ ಕಾರ್ಯಕರ್ತರ ಮನೆಗೆ ಹೋಗುವುದು, ಪರಿವಾರದ ಮುಖಂಡರನ್ನು ಗುರಿ ಮಾಡುವುದು, ಭಾವಚಿತ್ರ ತೆಗೆಯುವುದು, ರಿವಾಲ್ವರ್ ತೋರಿಸಿ ಬೆದರಿಕೆ ಹಾಕುವ ವರ್ತನೆ ಸರಿಯಾದ್ದಲ್ಲ ಎನ್ನುವುದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ, ಮುಖಂಡರಾದ ಅರವಿಂದ ಬೆಲ್ಲದ, ರವಿಕುಮಾರ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾೖಕ್ ಉಳಿಪಾಡಿ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಪ್ರಮುಖರಾದ ಬಿ. ನಾಗರಾಜ ಶೆಟ್ಟಿ, ಯತೀಶ್ ಅರ್ವಾರ್, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post