ಮಧ್ಯಪ್ರದೇಶ: ಹನಿಮೂನ್‌ಗಾಗಿ ಇಂದೋರ್‌ನಿಂದ ಮೇಘಾಲಯದ ಶಿಲ್ಲಾಂಗ್‌ಗೆ ತಲುಪಿದ ನವಜೋಡಿ ನಿಗೂಢವಾಗಿ ಕಾಣೆಯಾಗಿದ್ದ ಘಟನೆ 17 ದಿನಗಳ ಸಂಚಿಕೆಯಾಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಉದ್ಯಮಿ ದಂಪತಿ ಕಣ್ಮರೆ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಂಡು ಅಂತಿಮವಾಗಿ, ಪತಿಯ ಕೊಲೆಗೆ ಪತ್ನಿಯೇ ಸುಪಾರಿ ನೀಡಿದ್ದಳು ಎಂಬುದರೊಂದಿಗೆ ಕಥೆ ಕುತೂಹಲಗಳಿಗೆ ತೆರೆ ಎಳೆದಿದೆ.
ಹನಿಮೂನ್ ದಂಪತಿಯ 17 ದಿನಗಳ ಮೆಗಾ ಸಂಚಿಕೆಯಲ್ಲಿ ಅಂತಿಮವಾಗಿ ಎಲ್ಲಾ ಸಾಂದರ್ಭಿಕ ಪುರಾವೆಗಳನ್ನು ಸಂಗ್ರಹಿಸಿದ ಮೇಘಾಲಯ ಪೊಲೀಸರು ರಾಜಾ ರಘುವಂಶಿ ಅವರ ಪತ್ನಿ ಸೋನಮ್ ರಘುವಂಶಿ ಅವರೇ ಈ ಸಿನಿಮಾ ಕಥೆಯ ಪ್ರಮುಖ ಪಾತ್ರದಾರಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಸೋನಮ್ ಇಂದೋರ್ ನಿಂದ ಹೊರಟ ಬಳಿಕ ಪ್ರಿಯಕರ ರಾಜ್ ಕುಶ್ವಾಹ ನೇಮಿಸಿದ್ದ ಮೂವರು ಆರೋಪಿಗಳು ಸಹ ಸಿಲ್ಲಾಂಗ್ ಗೆ ಹೊರಟಿದ್ದಾರೆ. ತಾವು ಅಂದುಕೊಂಡಂತೆ ಉದ್ಯಮಿ ರಾಜಾ ರಘುವಂಶಿಯನ್ನು ಕೊಲೆ ಮಾಡಿ ಕಣ್ಮರೆ ಆಗಿದ್ದರು. ಅತ್ತ ದಂಪತಿ ಯಾರೊಂದಿಗೂ ಸಂಪರ್ಕಕ್ಕೆ ಸಿಗದಿದ್ದರಿಂದ ಕಣ್ಮರೆ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ತನಿಖೆ ಆರಂಭಿಸಿದ ಮೇಘಾಲಯ ಪೊಲೀಸರಿಗೆ ರಾಜಾ ರಘುವಂಶಿ ಮೃತ ದೇಹ ಶಿಲ್ಲಾಂಗ್ ನ ಕಂದಕದಲ್ಲಿ ಪತ್ತೆ ಆಗಿತ್ತು. ಹತ್ಯೆ ಮಾಡಿದ ಬಳಿಕ ಅಂದರೆ ನಿನ್ನೆಯವರೆಗೂ ಸೋನಮ್ ಎಲ್ಲಿದ್ದಳು? ಅವಳು ಇದ್ದಕ್ಕಿದ್ದಂತೆ ಘಾಜಿಪುರದಲ್ಲಿ ಹೇಗೆ ಕಾಣಿಸಿಕೊಂಡಳು? ಸೋನಮ್ ಅಂತಿಮವಾಗಿ ಘಾಜಿಪುರವನ್ನು ತಲುಪಿದ್ದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ಸಾರಿಗೆ ಉದ್ಯಮಿ ರಾಜ ರಘುವಂಶಿ ಜೊತೆ ಹನಿಮೂನ್‌ಗೆ ಹೋಗಿದ್ದ ಸೋನಮ್ ರಘುವಂಶಿ ಬಗ್ಗೆ ಈಗ ಮತ್ತೊಂದು ದೊಡ್ಡ ಅಪ್‌ಡೇಟ್ ಹೊರಬರುತ್ತಿದೆ. ಮೂಲಗಳ ಪ್ರಕಾರ ಕೊಲೆಗೆ ಕೇವಲ ಅರ್ಧ ಗಂಟೆ ಮೊದಲು ರಾಜಾ ರಘುವಂಶಿ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಸೋನಮ್ ರಘುವಂಶಿ 3 ಗುತ್ತಿಗೆ ಹಂತಕರ ಸಹಾಯದಿಂದ ಹರಿತವಾದ ಆಯುಧದಿಂದ ರಾಜಾನನ್ನು ಕೊಲೆ ಮಾಡಿ ನಂತರ ಆತನ ದೇಹವನ್ನು ಆಳವಾದ ಕಂದಕಕ್ಕೆ ಎಸೆದಿದ್ದಾರೆ. ಇದರ ನಂತರ, ಸೋನಮ್ ಮೊದಲು ಶಿಲ್ಲಾಂಗ್‌ನಿಂದ ಗುವಾಹಟಿ ತಲುಪಿ ನಂತರ ನೇರವಾಗಿ ವಾರಾಣಸಿಗೆ ಹೋಗಿದ್ದಾರೆ. ಅಲ್ಲಿಂದ ಅವರು ಘಾಜಿಪುರ ತಲುಪಿದ್ದಾರೆ ಎನ್ನಲಾಗಿದೆ.
ಎಡಿಸಿಪಿ ರಾಜೇಶ್ ದಂಡೌಟಿಯಾ ಅವರು ನೀಡಿರುವ ಮಾಹಿತಿ ಪ್ರಕಾರ, ಸೋನಮ್‌ನ ಪ್ರೇಮಿ ರಾಜ್ ಕುಶ್ವಾಹನನ್ನು ಇಂದೋರ್‌ನಲ್ಲಿಯೇ ಪೊಲೀಸರು ಬಂಧಿಸಿದ್ದರು. ಸೋನಮ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಇದನ್ನು ಪತ್ತೆ ಹಚ್ಚಿದ ಪೊಲೀಸರು ರಾಜ್ ಕುಶ್ವಾಹ ನಿಂದ ಸೋನಮ್‌ಗೆ ವಿಡಿಯೋ ಕರೆ ಮಾಡುವಂತೆ ಮಾಡಿದರು. ಸೋನಮ್ ಗೆ ತನ್ನ ಪ್ರೇಮಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ಈಗ ಸ್ಪಷ್ಟವಾಗಿತ್ತು. ಇನ್ನು ತಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಅವಳಿಗೆ ಬಂದಿತ್ತು. ಆಗ ಆಕೆ ಸಂಪೂರ್ಣವಾಗಿ ಗಲಿಬಿಲಿಗೊಂಡಿದ್ದಳು. ಅನ್ಯ ಮಾರ್ಗವಿಲ್ಲದೇ ಸೋನಂ ಗಾಜಿಪುರದ ಬಳಿಯ ಢಾಬಾ ತಲುಪಿದಳು. ಅಲ್ಲಿಯೇ ಪೊಲೀಸರಿಗೆ ಶರಣಾಗಲು ನಿರ್ಧರಿಸಿದಳು.
ಲವ್ ಮ್ಯಾರೇಜ್ ಮಾಡಿಕೊಳ್ಳಲು ಬಯಸಿದ್ದ ಸೋನಂ: ಈ ನಡುವೆ ಬಂಧಿತ ಪ್ರಿಯಕರ ರಾಜ್ ಕುಶ್ವಾಹ, ತಾನು ಸೋನಮ್ ಜೊತೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾಗಿ ಪೊಲೀಸ ಎದುರು ಹೇಳಿಕೊಂಡಿದ್ದಾನೆ. ಸೋನಮ್ ತಂದೆ ಹೃದಯ ರೋಗಿಯಾಗಿದ್ದರು. ಅವಳು ರಾಜ್ ಜೊತೆ ಪ್ರೇಮ ವಿವಾಹವಾದರೆ, ಅವಳ ತಂದೆಗೆ ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂದು ಅವರು ಹೆದರುತ್ತಿದ್ದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸೋನಮ್ ತನ್ನ ಸ್ವಂತ ಸಮುದಾಯದಲ್ಲೇ ತಂದೆ -ತಾಯಿ ನೋಡಿದ ವರನನ್ನು ವಿವಾಹವಾದರು.
ಮದುವೆಗೆ ಮೊದಲು ಅವಳು ರಾಜಾನನ್ನು ದಾರಿ ತಪ್ಪಿಸಲು ಸಂಚು ರೂಪಿಸಲು ಪ್ರಾರಂಭಿಸಿದ್ದಳು. ಅವಳ ಪ್ರೇಮಿ ರಾಜ್ ಕುಶ್ವಾಹ ಈ ಪಿತೂರಿಯಲ್ಲಿ ಅವಳನ್ನು ಸಂಪೂರ್ಣವಾಗಿ ಬೆಂಬಲಿಸಿದ್ದನಂತೆ. ಸೋನಮ್ ತನ್ನ ಪ್ರೇಮಿಯ ಸಲಹೆಯ ಮೇರೆಗೆ ಶಿಲ್ಲಾಂಗ್‌ಗೆ ಹೋಗಲು ಯೋಜನೆ ರೂಪಿಸಿದ್ದಳು. ಇದಾದ ನಂತರ ಪ್ರಿಯಕರ ರಾಜ್ ತನ್ನ ಮೂವರು ಸ್ನೇಹಿತರಾದ ಆಕಾಶ್ ರಜಪೂತ್, ಆನಂದ್ ಕುರ್ಮಿ, ವಿಶಾಲ್ ಚೌಹಾಣ್ ಅವರನ್ನು ರಾಜಾ ಹತ್ಯೆಗಾಗಿ ಶಿಲ್ಲಾಂಗ್‌ಗೆ ಕಳುಹಿಸಿಕೊಟ್ಟಿದ್ದ.
ವಿಚಾರಣೆಯ ಸಮಯದಲ್ಲಿ ಹಲವು ಮಾಹಿತಿ ಬಹಿರಂಗ: ಸೋನಮ್ ತನ್ನ ಪತಿ ರಾಜಾ ರಘುವಂಶಿಯೊಂದಿಗೆ ಶಿಲ್ಲಾಂಗ್‌ನ ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಿದ್ದಾಗ ಈ ಮೂವರು ಸುಪಾರಿ ಹಂತಕರು ಕೂಡಾ ಶಿಲ್ಲಾಂಗ್ ತಲುಪಿದ್ದರು. ಈ ಹಂತಕರಿಗೆ ಸೋನಂ ಇದರ ಎಲ್ಲಾ ವಿವರಗಳನ್ನು ನೀಡುತ್ತಿದ್ದಳು ಎಂದು ತಿಳಿದುಬಂದಿದೆ. ಅದಕ್ಕಾಗಿಯೇ ಮೂವರು ಸುಪಾರಿ ಹಂತಕರು ಈ ದಂಪತಿಗಳನ್ನು ಹಿಂಬಾಲಿಸುತ್ತಿದ್ದರು. ಕೊಲೆಗೆ ಸ್ವಲ್ಪ ಸಮಯದ ಮೊದಲು ಮೂವರು ಸುಪಾರಿ ಹಂತಕರು ಈ ದಂಪತಿ ಬಳಿಗೆ ಬಂದಾಗ ಕಣಿವೆಯಲ್ಲಿ ಪದೇ ಪದೇ ಹತ್ತಿ ಇಳಿದಿದ್ದರಿಂದ ಎಲ್ಲರೂ ಸುಸ್ತಾಗಿದ್ದರು. ಈ ಮೂವರು ಸುಪಾರಿಹಂತಕರು ರಾಜಾನನ್ನು ಕೊಲ್ಲಲು ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದರಂತೆ. ಈ ವೇಳೆ ಸೋನಮ್ ಇವರ ಮೇಲೆ ಕೋಪ ಗೊಂಡಿದ್ದಳಂತೆ. ಆಗ ಮೂವರಿಗೆ ನಾನು 20 ಲಕ್ಷ ರೂ ಕೊಡುತ್ತೇನೆ, ಆತನನ್ನು ಬಿಡಬೇಡಿ ಎಂದು ಸುಪಾರಿ ನೀಡಿದ್ದಳಂತೆ. ವಿಚಾರಣೆ ವೇಳೆ ಅಚ್ಚರಿಯ ವಿಚಾರಗಳು ಹೊರ ಬಿದ್ದಿವೆ.
Discover more from Coastal Times Kannada
Subscribe to get the latest posts sent to your email.
Discussion about this post