ಮೈಸೂರು: ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಚಾಮುಂಡಿಬೆಟ್ಟದಲ್ಲಿನ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಾಯಿತು. ಸಚಿವರುಗಳಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ,ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯ ಸ್ಥಿತಿಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ತಜ್ಞರು ಕೂಡ ಮಕ್ಕಳ ಆರೋಗ್ಯದತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಲೆಯಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. 6-14 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಕೊರೋನಾ 3ನೇ ಅಲೆ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಕೋವಿಡ್ ಸೋಂಕು ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿ ಬಿಸಿ ತಪಾಸಣೆ ಆರಂಭಿಸಲಾಗಿದೆ. 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಗಡಿ ಪ್ರವೇಶಿಸುವವರಿಗೆ ಆರ್’ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
ಗಡಿ ಭಾಗದ ಹಳ್ಳಿ ಅಥವಾ ಹಾಡಿಯ ಜನರಿಗೆ ಮೊದಲ ಪ್ರಾಶಸ್ತ್ಯದ ಲಸಿಕೆ ನೀಡಬೇಕು. ಡಿಸಿ, ಎಸ್ಪಿ, ಡಿವೈಎಸ್ಪಿ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post