ಬೆಂಗಳೂರು: ಡ್ರಗ್ಸ್ ವಿರುದ್ಧ ಸಮರ ಮುಂದುವರೆಸಿರುವ ನಗರದ ಪೊಲೀಸರು 55.8 ಕೋಟಿ ಮೌಲ್ಯದ ಒಟ್ಟು 200 ಕೆಜಿಗೂ ಅಧಿಕ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ‘ಮಿಷನ್ RISE’ ಮತ್ತು ‘ಬೇಡ ಬ್ರೋ’ ಅಭಿಯಾನದಡಿ ಯಶಸ್ವಿ ಕಾರ್ಯಾಚರಣೆ ನಡೆಸಿ 8 ಮಂದಿ ವಿದೇಶಿಯರು ಹಾಗೂ 21 ಅನ್ಯ ರಾಜ್ಯದವರು ಸೇರಿ ಒಟ್ಟು 39 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಜೊತೆಗೆ 16 ಠಾಣೆ ಪೊಲೀಸರಿಂದಲೂ ಸಾಥ್: ಸಿಸಿಬಿ ಸೇರಿ ಒಟ್ಟು 16 ಠಾಣೆಗಳ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗಿದೆ. ಅಮೃತಹಳ್ಳಿ, ಗಿರಿನಗರ, ಕೆಐಎ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿ 55 ಕೋಟಿಗೂ ಅಧಿಕ ಪ್ರಮಾಣದ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ವಶಕ್ಕೆ ಪಡೆದ ಮಾದಕ ವಸ್ತುಗಳು:
- ಎಂಡಿಎಂಎ : 21 ಕೆಜಿ 641 ಗ್ರಾಂ
- ಕೋಕೇನ್: 738 ಗ್ರಾಂ
- ಹೈಡ್ರೋಗಾಂಜಾ: 4 ಕೆಜಿ 493 ಗ್ರಾಂ
- ಗಾಂಜಾ: 184 ಕೆಜಿ 625 ಗ್ರಾಂ
- ಅಫೀಮು: 1 ಕೆಜಿ 65 ಗ್ರಾಂ
- ಮಾರ್ಫಿನ್: 25 ಗ್ರಾಂ,
ಜೊತೆಗೆ ಬಂಧಿತರಿಂದ 17 ಲಕ್ಷ ರೂ. ನಗದು 22 ಮೊಬೈಲ್ ಫೋನ್ ಹಾಗೂ 05 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
28.8ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದ ಪೊಲೀಸರು: ಇದರಲ್ಲಿ ಅಮೃತಹಳ್ಳಿ ಪೊಲೀಸರಿಂದ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ ಸೀಜ್ ಆಗಿದ್ದು, ಒಟ್ಟು 28.8 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೆಹಲಿ ಹಾಗೂ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ದೆಹಲಿ ಆಮ್ನೀ ಸಿಂಗ್ ಮತ್ತು ನೈಜೀರಿಯಾದ ಓಬಮ್ ಬಂಧಿತರು. ಇಬ್ಬರನ್ನೂ ದೆಹಲಿಯಲ್ಲಿ ಬಂಧಿಸಲಾಗಿದೆ. ಇವರು ದೆಹಲಿಯಲ್ಲೇ ಮಾದಕವಸ್ತು ತಯಾರಿಸಿ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಕಳೆದ ಹತ್ತು ದಿನಗಳಿಂದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮಾದಕವ್ಯಸನದ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post