ಬೆಂಗಳೂರು, ನ.11: ಬಿಟ್ ಕಾಯಿನ್ ಹಗರಣದ ಆರೋಪಿ ಬಡವರ ಹೆಸರಲ್ಲಿ ಮಾಡಿದ್ದ ಜನಧನ್ ಖಾತೆಗಳಿಂದ ತಲಾ 2 ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆಂಬ ಮಾಹಿತಿಯೂ ಇದೆ. ಆದರೆ ಇಂಥ ಗಂಭೀರ ಪ್ರಕರಣದ ಆರೋಪಿಯನ್ನು ಬಿಜೆಪಿ ಸರಕಾರದ ನಾಯಕರು ಸೇರಿ ಜಾಮೀನು ಕೊಟ್ಟು ಕಳುಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬಿಟ್ ಕಾಯಿನ್ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?
ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಸಿಕ್ಕಿದ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಎಂದು ಪ್ರಶ್ನಿಸಿದರು.
ಆರೋಪಿ ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾನೆ. ಮಾಧ್ಯದವರ ಜತೆ ಆ ವ್ಯಕ್ತಿ ಮಾತನಾಡುತ್ತಾನೆ, ನಂತರ ಆಟೋ ಹತ್ತಿ ಹೋಗುತ್ತಾನೆ. ಇದೆಲ್ಲ ನೋಡಿದರೆ ಅದರ ಹಿಂದೆ ಯಾರೋ ಇರುವುದು ಸ್ಪಷ್ಟ ಎಂದರು ಅವರು.
ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಸರ್ಕಾರದ ಪರ ವಕೀಲರು ಎಷ್ಟರ ಮಟ್ಟಿಗೆ ವಾದ ಮಂಡಿಸಿದ್ದಾರೆ ಎನ್ನುವುದೂ ಮುಖ್ಯ. ಇಲ್ಲಿ ಯಾರಿಂದ ಯಾರ ರಕ್ಷಣೆ ಆಗಿದೆ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.