ಮಂಗಳೂರು, ನ.11: ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸೆಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಇಬ್ಬರು ಟಿಬೆಟಿಯನ್ ಪ್ರಜೆಗಳನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತೆ ಮೂರು ಮಂದಿ ನೇರವಾಗಿ ಭಾಗಿಯಾಗಿರುವವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅತ್ತಾವರ ನಿವಾಸಿ ಸಿ.ಡಿ. ಅಲೆಗ್ಸಾಂಡರ್ ಎಂಬವರು ಕಳೆದ ಸೆ.9 ರಂದು ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್ ಮಾಡಿದ್ದರೂ ಅದರಿಂದ 1.12 ಲಕ್ಷ ರೂ. ಡ್ರಾ ಆಗಿದ್ದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. 2021ರ ಮಾರ್ಚ್ 23 ರಂದು ಎಸ್ ಬಿಐ ಬ್ಯಾಂಕ್ ಶಾಖೆಗೆ ತೆರಳಿ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಹೆಚ್ಚಾಗಿದ್ದರಿಂದ ಅದನ್ನು ಮರಳಿ ಬ್ಯಾಂಕಿಗೆ ಕೊಟ್ಟಿದ್ದರು. ಆದರೆ ಮಾರ್ಚ್ 27 ರಂದು ಕ್ರೆಡಿಟ್ ಕಾರ್ಡ್ ಮೂಲಕ 1.12 ಲಕ್ಷ ರೂ. ಡ್ರಾ ಆಗಿತ್ತು. ಬ್ಯಾಂಕ್ ಸಿಬಂದಿ ಬಳಿ ಕೇಳಿದಾಗ, ಕ್ರೆಡಿಟ್ ಕಾರ್ಡ್ ಮೂಲಕ ಡ್ರಾ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಮೊಬಿವಿಕ್ ವ್ಯಾಲೆಟ್ ಏಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು. ಅಲ್ಲದೆ, ಈ ಹಣವು ಉತ್ತರ ಕನ್ನಡ ಜಿಲ್ಲೆಯ ತಟ್ಟಿಹಳ್ಳಿಯ ಕೆನರಾ ಡಿಸಿಸಿ ಬ್ಯಾಂಕ್ ಶಾಖೆಯ ಮುಂಡಗೋಡ ನಿವಾಸಿ ಲೋಬ್ ಸ್ಯಾಂಗ್ ಸ್ಯಾಂಗಿಸ್ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದುಬಂದಿತ್ತು.
ಬಂಧಿತರನ್ನು ಉತ್ತರ ಕನ್ನಡದ ಮುಂಡುಗೋಡು ಟಿಬೆಟಿಯನ್ ಕಾಲನಿಯ ಶರಗಡನ್ ಮೊನಸ್ಟ್ರಿಯ ಲೋಬಸಂಗ್ ಸಂಗೈ (24) ಹಾಗೂ ದಕಪ ಪುಂದೇ (40) ಎಂದು ಗುರುತಿಸಲಾಗಿದೆ.
ಹಣ ವಂಚನೆಗೆ ನಿಷೇಧಿತ ಚೀನಾ ಆ್ಯಪ್ ಬಳಕೆ:
ಈ ಬಗ್ಗೆ ತನಿಖೆ ನಡೆಸಿದ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಚೀನಾದ ಆ್ಯಪ್‌ಗಳಾದ ವಿಚಾಟ್ ಹಾಗೂ ರೆಡ್‌ಪ್ಯಾಕ್‌ನ ಮೂಲಕ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಮೊಬಿಕ್ವಿಕ್ ವಾಲೆಟ್ ಆ್ಯಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿದ್ದ ಎರಡು ಖಾತೆಗಳಿಗೆ ಈ ಕ್ರೆಡಿಟ್ ಕಾರ್ಡ್ ಹಣ ವರ್ಗಾಯಿಸಲಾಗಿತ್ತು. ಮಾತ್ರವಲ್ಲದೆ ಉತ್ತರ ಕನ್ನಡ ತಟ್ಟಿ ಹಳ್ಳಿಯಲ್ಲಿರುವ ಕೆನರಾ ಡಿಸಿಸಿ ಬ್ಯಾಂಕ್‌ನ ಖಾತೆದಾರನಾದ ಲೋಬ್ ಸ್ಯಾಂಗ್ ಸ್ಯಾಂಗಿಸ್ ಎಂಬಾತನ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯ ವೇಳೆ ಕಂಡು ಬಂದಿದೆ.
”ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ವಂಚನೆ ಪ್ರಕರಣಗಳು ಇನ್ನಷ್ಟು ನಡೆದಿರುವ ಸಾಧ್ಯತೆಯ ಕುರಿತಂತೆಯೂ ತನಿಖೆ ನಡೆಯುತ್ತಿದೆ. ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗೆ ಸರೆಂಡರ್ ಮಾಡಿದ್ದ ವೇಳೆ ಈ ಪ್ರಕರಣ ನಡೆದಿರುವುದರಿಂದ ಬ್ಯಾಂಕ್‌ನ ಪಾಲುದಾರಿಕೆಯ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ”.