ಮಂಗಳೂರು: ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರವ್ಯಾ ಈ ಸಾಧನೆ ಮಾಡಿದವರು. ಸ್ಕೇಟಿಂಗ್ ನೃತ್ಯದ ಮೂಲಕ ಅವರು ವಿಶ್ವ ದಾಖಲೆ ಮಾಡಿದ್ದಾರೆ. ಡಿ.12ರ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ನಿರಂತರ 4 ಗಂಟೆಗಳ ಕಾಲ ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿದ್ದಾರೆ.
ಮಂಗಳೂರು ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್ ದಂಪತಿ ಪುತ್ರಿ ಸುಶ್ರವ್ಯಾ ಸಂತ ಆಗ್ನೆಸ್ ಕಾಲೇಜು ಮಂಗಳೂರಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ. ಅವರ ಪರಿಶ್ರಮ ಮತ್ತು ಕಲಾಸಾಧನೆಗೆ ಜಾಗತಿಕ ಮಾನ್ಯತೆ ಲಭಿಸಿದೆ. ಸುಶ್ರಾವ್ಯ ಕಳೆದ 14 ವರ್ಷಗಳಿಂದ ಸ್ಕೇಟಿಂಗ್ ಕ್ಷೇತ್ರದಲ್ಲಿ ತಮ್ಮ ಗುರುಗಳಾದ ಸುಮನ್ ಶ್ರೀಕಾಂತ್ ಇವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದು, ಅದೇ ರೀತಿಯಲ್ಲಿ, ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್ ಪರೀಕ್ಷೆಯನ್ನು ಪ್ರತಿಮಾ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್ ಪರೀಕ್ಷೆಯನ್ನು ಸುರೇಶ್ ಅತ್ತಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಲಾತ್ಮಕ ಸ್ಕೇಟಿಂಗ್ ಸ್ವತಃ ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ದಾಖಲೆ ಬರೆದಿರುವ ಇವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ. ಮನೀಷ್ ವೈಷ್ಣೋಯಿ ಅವರು ಸಾಂಕೇತಿಕವಾಗಿ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿರುವ ಸುಶ್ರಾವ್ಯ ಅವರಿಗೆ ಈ ದಾಖಲೆಯನ್ನು 12 ಗಂಟೆಗೂ ಹೆಚ್ಚು ಕಾಲ ಮಾಡಬೇಕು ಎಂಬ ಗುರಿ ಇತ್ತು. ಆದರೆ, ಅವರಿಗೆ ಮಧ್ಯೆ ವಾಂತಿ ಕಾಣಿಸಿಕೊಂಡ ಪರಿಣಾಮ 4 ಗಂಟೆಗೆ ಕೊನೆಗೊಳಿಸಿದ್ದಾರೆ. ಈ ಹಿಂದಿನ ದಾಖಲೆ 3 ಗಂಟೆಗಳ ಕಾಲ ಇದ್ದ ಕಾರಣ, ಅದನ್ನು ಸುಶ್ರಾವ್ಯ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸುಶ್ರಾವ್ಯ, “ನನಗೆ 12 ಗಂಟೆಗೂ ಹೆಚ್ಚು ಸಮಯ ಸ್ಕೇಟಿಂಗ್ ನೃತ್ಯ ಮಾಡುವ ಗುರಿ ಇತ್ತು. ಆದರೆ, ಮಧ್ಯೆ ವಾಂತಿ ಕಾಣಿಸಿಕೊಂಡ ಪರಿಣಾಮ ಅದನ್ನು ನಿಲ್ಲಿಸಿದೆ. ಆದರೆ ಈ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದೇನೆ. ಈ ಸಾಧನೆಗಾಗಿ ನಿರಂತರ ಶ್ರಮ ಪಡುತ್ತಿದ್ದೆ” ಎಂದು ತಿಳಿಸಿದ್ದಾರೆ.
ಸುಶ್ರಾವ್ಯ ಅವರ ತಾಯಿ ಶಶಿರೇಖಾ ಮಾತನಾಡಿ, “ಹಿಂದೆ 90 ನಿಮಿಷದ ದಾಖಲೆ ಇತ್ತು. ಆದರೆ, ಸುಶ್ರಾವ್ಯ 4 ಗಂಟೆ ಮಾಡಿ ದಾಖಲೆ ಮಾಡಿದ್ದಾಳೆ. 1ನೇ ತರಗತಿಯಿಂದ ಸ್ಕೇಟಿಂಗ್ ಕಲಿತಿದ್ದಾಳೆ. ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಆಗಿದೆ. ಆದ ಕಾರಣ ಭರತನಾಟ್ಯವನ್ನು ಸ್ಕೇಟಿಂಗ್ ಮುಖಾಂತರ ಮಾಡಿದ್ದಾಳೆ. ಈಕೆ ಸಾಧನೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ” ಎನ್ನುತ್ತಾರೆ.
ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಅವರು, “ಸುಶ್ರಾವ್ಯ ದಾಖಲೆ ಮಾಡುವ ಇಚ್ಛೆ ತೋರಿಸಿದ್ದಳು. ನಾವು ಅದನ್ನು ಪ್ರೋತ್ಸಾಹಿಸಿದ್ದೇವೆ. ಕಳೆದ ಒಂದು ವಾರ ಇದರ ಪ್ರಾಕ್ಟಿಸ್ ಮಾಡಿದ್ದಳು. ಇವತ್ತು ಕೂಡ ಅವಳು ಉತ್ಸಾಹದಿಂದ ಮಾಡಿದ್ದಾಳೆ. ಆಕೆಯ ಸಾಧನೆಗೆ ಹೆಮ್ಮೆಯಾಗುತ್ತಿದೆ” ಎಂದರು.
Discover more from Coastal Times Kannada
Subscribe to get the latest posts sent to your email.







Discussion about this post