ಮೈಸೂರು: ಕಳೆದ ದಸರಾ ಸಂದರ್ಭದಲ್ಲಿ ಇಟ್ಟಿಗೆಗೂಡಿನ ಬಳಿ 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಅಪರಾಧಿ ಕಾರ್ತಿಕ್ಗೆ(32) ನಗರದ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿ ಇಂದು ತೀರ್ಪು ನೀಡಿದೆ.
ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಸಮಯದಲ್ಲಿ ವ್ಯಾಪಾರಕ್ಕಾಗಿ ಕಲಬುರಗಿಯಿಂದ ಕುಟುಂಬವೊಂದು ಮೈಸೂರಿಗೆ ಬಂದಿತ್ತು. ಈ ಕುಟುಂಬದ 9 ವರ್ಷದ ಪುಟ್ಟ ಬಾಲಕಿ ದಸರಾ ವಸ್ತುಪ್ರದರ್ಶನದ ಆವರಣದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಳು. ರಾತ್ರಿ ವೇಳೆ ಬಾಲಕಿ ತನ್ನ ಕುಟುಂಬದೊಂದಿಗೆ ಟೆಂಟ್ನಲ್ಲಿ ನಿದ್ರಿಸುತ್ತಿದ್ದಾಗ, ಅಪರಾಧಿ ಕಾರ್ತಿಕ್ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ. ಬಳಿಕ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ನಾಪತ್ತೆಯಾಗಿದ್ದ.
24 ಗಂಟೆಯಲ್ಲೇ ಆರೋಪಿ ಬಂಧನ : ಈ ಘಟನೆ ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಘಟನೆ ನಡೆದ ಕೇವಲ 24 ಗಂಟೆಗಳ ಒಳಗಾಗಿ ಆರೋಪಿ ಕಾರ್ತಿಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪರಾರಿಯಾಗಲು ಯತ್ನ, ಕಾಲಿಗೆ ಗುಂಡೇಟು: ಕೊಳ್ಳೇಗಾಲದಲ್ಲಿ ಕಾರ್ತಿಕ್ನನ್ನು ಬಂಧಿಸಿದ್ದ ಪೊಲೀಸರು ಮೈಸೂರಿಗೆ ಕರೆದುಕೊಂಡು ಬಂದು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪುನಃ ಈತನ ಗ್ರಾಮ ಸಿದ್ದಲಿಂಗಪುರಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಮೇಟಗಳ್ಳಿ ಬಳಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹೀಗಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದ್ದರು. ಈ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ಕೋರ್ಟ್ ತೀರ್ಪು : ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೈಸೂರಿನ FTSC-1 ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪಿ. ವಘಾಢೆ ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಾರ್ತಿಕ್ಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಂತಿ ಅವರು ಪ್ರಬಲ ವಾದ ಮಂಡಿಸಿದ್ದರು. ಈ ತೀರ್ಪು ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗಿದ್ದು, ಇಂತಹ ಕಾಮುಕರಿಗೆ ಸೂಕ್ತ ಎಚ್ಚರಿಕೆಯಾಗಿದೆ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post