ಬೆಳಗಾವಿ: ಬೆಳಗಾವಿಯಲ್ಲಿ ರುಬೆಲ್ಲಾ ಲಸಿಕೆ ಪಡೆದ ಮೂವರು ಮಕ್ಕಳ ಸಾವಿಗೆ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಹೆಚ್ಒ) ಈಶ್ವರಪ್ಪ ಗಡದ್ ಅವರು ಸೋಮವಾರ ಹೇಳಿದ್ದಾರೆ.
ಆರೋಗ್ಯ ಸಿಬ್ಬಂದಿಗಳು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜ.10ರಂದು ಲಸಿಕೆ ಸಂಗ್ರಹಿಸಿದ್ದಾರೆ. ಬಳಿಕ ಬಳಕೆಯಾಗದ ಲಸಿಕೆಯನ್ನೂ ಇದೇ ದಿನ ಹಿಂತಿರುಗಿಸಬೇಕಿತ್ತು. ಆದರೆ, ಲಸಿಕೆಯನ್ನು ಹಿಂತಿರುಗಿಸದೆ ಹಳೆಯ ಲಸಿಕೆಯಿಟ್ಟಿದ್ದ ಬಾಕ್ಸ್ ನಲ್ಲಿಯೇ ಲಸಿಕೆಗಳನ್ನು ಇಟ್ಟಿದ್ದಾರೆ. ನಂತರ ಜನವರಿ 11 ಮತ್ತು 12 ರಂದು ಮಕ್ಕಳಿಗೆ ಲಸಿಕೆಗಳನ್ನು ನೀಡಿದ್ದಾರೆ. ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಮುಗ್ಧ ಮಕ್ಕಳು ಪ್ರಾಣ ತೆತ್ತಿದ್ದಾರೆಂದು ಹೇಳಿದ್ದಾರೆ.
ಮಕ್ಕಳಿಗೆ ನೀಡುವ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್ ನಲ್ಲಿಯೇ ಇಡಬೇಕು. 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಸಿಕೆ ಇಡಬೇಕು. ಆದರೆ, ಲಸಿಕಾಕರಣಕ್ಕಾಗಿ ಜ.10ರಂದು ಲಸಿಕೆ ವಯಲ್ ತೆಗೆದುಕೊಂಡಿದ್ದ ಆರೋಗ್ಯ ಸಿಬ್ಬಂದಿ 2 ದಿನ ಹೋಟೆಲ್’ನ ಫ್ರಿಡ್ಜ್ ನಲ್ಲಿಟ್ಟಿದ್ದರು. ಬಳಿಕ ಲಸಿಕೆ ವಾಪಸ್ ತೆಗೆದುಕೊಂಡಿರುವ ಸಿಬ್ಬಂದಿ ವಾಪಸ್ ಐಎಲ್ಆರ್ ರೆಫ್ರಿಜರೇಟರ್ ನಲ್ಲಿ ಇಟ್ಟಿದ್ದರೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ ಲಸಿಕೆಯನ್ನು ಮಕ್ಕಳಿಗೆ ನೀಡಿದ್ದಾರೆ. ಇದರ ಪರಿಣಾಮ ಜನವರಿ 12 ರಂದು ಒಂದು ಮತ್ತು ಜ.16ರಂದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.
ಇನ್ನಿಬ್ಬರು ಮಕ್ಕಳಲ್ಲೂ ವಾಂತಿ, ಭೇದಿ, ಜ್ವರ ಲಕ್ಷಣಗಳು ಕಂಡು ಬಂದಿದ್ದು, ಈಗಲೂ ಇಬ್ಬರೂ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಇಬ್ಬರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖಾ ವರದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ, ನರ್ಸ್ ಹಾಗೂ ಫಾರ್ಮಸಿಸ್ಟ್ ನ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತ ವೈದ್ಯಕೀಯ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು, ಸಿಬ್ಬಂದಿಗಳು ಲಸಿಕೆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post