ಕಡಬ: ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಅರಣ್ಯ ಇಲಾಖೆಯ ಸ್ಥಳವನ್ನು ಒತ್ತುವರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡು ಕಾನೂನುಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ತಕ್ಷಣ ಕಡಿತಗೊಳಿಸಬೇಕು, ತಪ್ಪಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಶಿರಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಕೆ.ಪೌಲೋಸ್ ಹೇಳಿದರು. ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡಬ ಮೆಸ್ಕಾಂ ಇಲಾಖೆಯಿಂದ ಪಡೆದುಕೊಂಡ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಕಳೆದ ತಿಂಗಳು ಮೆಸ್ಕಾಂಗೆ ಅರ್ಜಿ ಹಾಗೂ ಇಂಡೆಮ್ನಿಟಿ ಬಾಂಡನ್ನು ನೀಡಿದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಹೇಳಿದರು.
ಸ್ಥಳೀಯರಾದ ಹುಕ್ರಪ್ಪ ಗೌಡ ಹಾಗೂ ಎಚ್.ಜಿ. ಕುಮಾರ್ ಎಂಬವರು ಅಕ್ರಮವಾಗಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದರು. ಅವರು ಹತ್ತು ವರ್ಷಗಳ ಹಿಂದೆ ಈ ವ್ಯಾಪಾರ ಬಿಟ್ಟು ಬೇರೆ ಊರಿಗೆ ತೆರಳಿದ ಬಳಿಕ ಅಕ್ರಮ ಕಟ್ಟಡವನ್ನು ಖರೀದಿಸಿರುವ ಅಭಿಲಾಷ್ ಹಾಗೂ ಅವರ ತಂದೆ ಜೆ.ಜೋಸೆಫ್ ಎಂಬವರು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೆ ಹುಕ್ರಪ್ಪ ಹಾಗೂ ಎಸ್.ಜಿ.ಕುಮರ್ ಅವರ ಹೆಸರಿನಲ್ಲಿರುವ ವಿದ್ಯುತ್ ಸಂಪರ್ಕವನ್ನು ತಮ್ಮ ಹೆಸರಿಗೆ ಮಾಡಿಕೊಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಹುಕ್ರಪ್ಪ ಹಾಗೂ ಎಚ್.ಜಿ. ಕುಮಾರ್ ಅವರ ನಕಲಿ ಸಹಿ ಮಾಡಿ ಪಂಚಾಯಿತಿಗೆ ಹಾಗೂ ಮೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಿರುತ್ತಾರೆ. ಆದುದರಿಂದ ಅಭಿಲಾಷ್ ಹಾಗೂ ಜೋಸೆಫ್ ಅವರ ವಿರುದ್ಧ ಮೆಸ್ಕಾಂ ಹಾಗೂ ಪೋಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ ಎಂ.ಕೆ.ಪೌಲೋಸ್ ತಕ್ಷಣ ಅಕ್ರಮ ವಿದ್ಯತ್ ಸಂಪರ್ಕ ಕಡಿತಗೊಳಿಸದಿದ್ದರೆ ಮೆಸ್ಕಾಂ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಜೀಶ್ ಜಿ ಮಾಣಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post