ರೋಟರಿ ಶಿಕ್ಷಣ ಸಂಸ್ಥೆಗಳು ಮೂಡುಬಿದಿರೆ ಮತ್ತು ಫೋರಂ ಫಾರ್ ಜಸ್ಟೀಸ್ ಮಂಗಳೂರು , ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಮ್ಮಿಲನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ ಪಿ. ಎಂ. ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮೂಡುಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಎಸ್ ವಿರೂಪಾಕ್ಷಪ್ಪ ಇವರು ಆರೋಗ್ಯವಂತ ಸಮಾಜ ಕಟ್ಟುವುದು ಶಿಕ್ಷಕರ ಮುಖ್ಯ ಗುರಿಯಾಗಬೇಕು. ಮಗುವು ದೈಹಿಕವಾಗಿ,
ಮಾನಸಿಕವಾಗಿ, ಭೌತಿಕವಾಗಿ ಸಮಾಜಮುಖಿ ವ್ಯಕ್ತಿತ್ವ ಬೆಳೆಸುವಲ್ಲಿ ಎಲ್ಲರ ಜವಾಬ್ದಾರಿಯನ್ನು ಒತ್ತಿ ಹೇಳಿ , ಶಿಕ್ಷಣದಿಂದ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಅನಂತಕೃಷ್ಣ ರಾವ್ ಇವರು ಅಜ್ಞಾನವೆಂಬ ಅಂಧಕಾರದಿಂದ ಮತ್ತು ಸಂಸ್ಕಾರಯುತ ಜೀವನ ಪದ್ಧತಿ ಇಲ್ಲದಿರುವುದೇ ಮಾದಕ ವ್ಯಸನಕ್ಕೆ ಮುಖ್ಯ ಕಾರಣ. ಇದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲಾ ಸ್ಕೌಟ್ & ಗೈಡ್ಸ್ ಕಮಿಷನರ್ ಆಗಿದ್ದ ಎನ್.ಜಿ. ಮೋಹನ್ ಇವರು ಮಾದಕ ವ್ಯಸನಗಳ ಜಾಗೃತಿಯ ಬಗೆಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಲ್ಲಿ ಕಂಡುಬರುತ್ತಿರುವ ಮಾದಕ ದ್ರವ್ಯ ವ್ಯಸನಗಳ ಚಟವನ್ನು ಹೋಗಲಾಡಿಸಲು ಶಿಕ್ಷಕರು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್ ಕುಮಾರ್ ಕದ್ರಿ, ನಿವೃತ್ತ ಜನರಲ್ ಮ್ಯಾನೇಜರ್ MRPL. ಇವರು ಮಾದಕ ವ್ಯಸನ ಮುಕ್ತ ಸಮಾಜವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿಗಳಾದ ದಯಾನಾಥ್ ಕೋಟ್ಯಾನ್ ಎಲ್ಲಾ ಧರ್ಮಗಳ ಸಾರ ವಾಗಿರುವ ಸಾಮಾಜಿಕ ಸಾಮರಸ್ಯದ ಬಗ್ಗೆ ವಿವರವಾಗಿ ಮಾತನಾಡಿ , ಮಾಧ್ಯಮಗಳ ವೈಭವಿಕರಣ , ನೆರೆಕರೆಯವರೊಂದಿಗಿನ ಸಂಬಂಧ , ಭ್ರಾತೃತ್ವ ಭಾವನೆ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿ , ಪರಸ್ಪರ ಭ್ರಾತೃತ್ವದ ಭಾವನೆ ಬೆಳೆಸಿಕೊಂಡು ಬದುಕಬೇಕೆಂದು ಕಿವಿ ಮಾತನ್ನು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾತೀಯತೆ ಎಂಬ ವಿಷಬೀಜವು ಮೊಳಕೆಯೊಡಯದಂತೆ ಮತ್ತು ಸೌಹಾರ್ದಯುತವಾಗಿ ‘ ವಸುದೈವ ಕುಟುಂಬಕಂ – ಜಗತ್ತು ಒಂದು ಕುಟುಂಬ” ಎಂಬಂತೆ ಸಹಬಾಳ್ವೆಯನ್ನು ನಡೆಸುವ ಗುಣವನ್ನು ಬೆಳೆಸಬೇಕು ಎಂದು ತಿಳಿಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹಾಗೂ ಫೋರಂ ಫಾರ್ ಜಸ್ಟೀಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಜೈನ್, ಇವರು ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಜೆ. ಡಬ್ಲ್ಯೂ. ಪಿಂಟೋ ,ರೋಟರಿ ಆಂಗ್ಲ ಮಾಧ್ಯಮಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್, ರೋಟರಿ ಸಿ.ಬಿ. ಎಸ್.ಇ ವಿಭಾಗದ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಮರಾಠೆ, ರೋಟರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕುಮಾರ್ ಮತ್ತು ಆಡಳಿತಾಧಿಕಾರಿ ಪ್ರಫುಲ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ವಿವಿಧ ವಿದ್ಯಾ ಸಂಸ್ಥೆಗಳ ಶಿಕ್ಷಕರೂ ಸೇರಿ ಸುಮಾರು 50 ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಶಿಕ್ಷಕಿಯರಾದ ಪ್ರೀತಿಕಾ ಹಾಗೂ ವಿನಯಾ ಇವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ ವಂದನಾರ್ಪಣೆಗೈದರು.
Discover more from Coastal Times Kannada
Subscribe to get the latest posts sent to your email.
Discussion about this post