ಮಂಗಳೂರು, ಸೆ.17 : ಮಂಗಳೂರಿನ ಹೆಸರಾಂತ ಹೊಟೇಲ್ ಹಂಪನಕಟ್ಟೆಯ ಪೂಂಜಾ ಇಂಟರ್ನ್ಯಾಶನಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ(72) ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
40 ವರ್ಷಗಳ ಹಿಂದೆ ಮುಂಬೈನಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಪ್ರಭಾಕರ ಪೂಂಜಾ ಅಲ್ಲಿನ ಒಬ್ಬ ಡಾನ್ ಗೆ ಕಾರು ಚಾಲಕನಾಗಿದ್ದರು. ಆನಂತರ, 1986ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು. ಆಗ ಇದ್ದ ಮೋತಿ ಮಹಲ್ ಬಿಟ್ಟರೆ ಅದ್ದೂರಿ ಮತ್ತು ಬೃಹತ್ ಹೊಟೇಲ್ ಎಂದು ಪೂಂಜಾ ಹೊಟೇಲ್ ಹೆಸರು ಮಾಡಿತ್ತು.
ಆರಂಭದಲ್ಲಿ ಮುಂಬೈ ನಂಟು ಇದ್ದರೂ ಆನಂತರ ಅಲ್ಲಿನ ನಂಟನ್ನು ಬಿಟ್ಟು ಮಂಗಳೂರಿನಲ್ಲೇ ಇದ್ದರು. ಸಣ್ಣ ವಯಸ್ಸಿನಲ್ಲೇ ಮುಂಬೈ ತೆರಳಿದ್ದರಿಂದ ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಹಿಂದಿ, ಮರಾಠಿ, ತುಳು ಮಾತ್ರ ಗೊತ್ತಿತ್ತು. 40 ವರ್ಷಗಳ ಹಿಂದೆ ಮುಂಬೈ ಭೂಗತ ಜಗತ್ತಿನಲ್ಲಿ ಡಾನ್ ಆಗಿದ್ದ ಶರದ್ ಶೆಟ್ಟಿ ಇವರ ಖಾಸಾ ಭಾವನಾಗಿದ್ದು, ಅದೇ ನಂಟಿನಲ್ಲಿ ಮಂಗಳೂರಿನಲ್ಲಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು. ಮಂಗಳೂರಿಗೆ ಬಂದ ಬಳಿಕವೇ ಅವರಿಗೆ ಮದುವೆಯಾಗಿತ್ತು ಎಂದು ಅವರ ಬಗ್ಗೆ ತಿಳಿದವರು ಹೇಳುತ್ತಾರೆ. ಅವರ ಮಕ್ಕಳು ಈಗ ಹೊಟೇಲ್ ನೋಡಿಕೊಳ್ಳುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post