ಬೆಂಗಳೂರು, ಜೂನ್ 19 : ಪೊಲೀಸ್ ಅಧಿಕಾರಿಯೊಬ್ಬರು ದರೋಡೆಕೋರರ ಗ್ಯಾಂಗ್ ಕಟ್ಟಿಕೊಂಡು ಕೇರಳ ಮೂಲದ ಉದ್ಯಮಿಗಳನ್ನು ಹೆದರಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದರೋಡೆ ಪ್ರಕರಣದಲ್ಲಿ ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮುಖ್ಯ ಸೂತ್ರಧಾರಿಯಾಗಿದ್ದು, ಸದ್ಯ ಪೊಲೀಸರು ದರೋಡೆಗೆ ಬಳಸಿದ್ದ ಅಧಿಕೃತ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದಾರೆ. ಕೇರಳ ಮೂಲದ ಉದ್ಯಮಿಗಳು ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಲಕ್ಷಾಂತರ ರೂಪಾಯಿ ನಗದಿನೊಂದಿಗೆ ಬೆಂಗಳೂರಿಗೆ ಬಂದು ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಉದ್ಯಮಿಗಳ ಬಳಿ ದೊಡ್ಡ ಮೊತ್ತದ ಹಣವಿರುವ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹಣ ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದರು.

ದಾಳಿಯ ದಿನದಂದು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ತಂಡವು ಹೋಟೆಲ್ ಮುಂಭಾಗದಲ್ಲಿ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನು ತಂದು ನಿಲ್ಲಿಸಿತ್ತು. ಜೀಪ್ ಒಳಗಡೆ ಇನ್ಸ್‌ಪೆಕ್ಟರ್ ಮಹೇಶ್ ಕಾಯುತ್ತಿದ್ದರೆ, ಇತ್ತ ಗ್ಯಾಂಗ್‌ನ ಇಬ್ಬರು ಸದಸ್ಯರು ಹೋಟೆಲ್ ಕೋಣೆಯೊಳಗೆ ನುಗ್ಗಿದ್ದಾರೆ. ತಾವು ಕ್ರೈಮ್ ವಿಭಾಗದ ಪೊಲೀಸರೆಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿದ ಆರೋಪಿಗಳು, “ನೀವು ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ” ಎಂದು ಉದ್ಯಮಿಗಳನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಇದರಿಂದ ಭಯಭೀತರಾದ ಉದ್ಯಮಿಗಳಿಂದ 20 ಲಕ್ಷ ರೂಪಾಯಿ ಹಣವನ್ನು ದೋಚಿದ ದರೋಡೆಕೋರರು, ಹೊರಗೆ ಕಾಯುತ್ತಿದ್ದ ಅದೇ ಸಿಐಡಿ ಜೀಪ್ ಹತ್ತಿ ಪರಾರಿಯಾಗಿದ್ದಾರೆ. ವಂಚಕರ ಜಾಲಕ್ಕೆ ಬಿದ್ದಿರುವುದು ತಡವಾಗಿ ಅರಿವಾದ ತಕ್ಷಣ ಸಂತ್ರಸ್ತ ಉದ್ಯಮಿಗಳು ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೋಟೆಲ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ದರೋಡೆಗೆ ಇಲಾಖೆಯ ಜೀಪ್ ಬಳಸಿರುವುದು ಪತ್ತೆಯಾಗಿದೆ.
ತಕ್ಷಣವೇ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ದರೋಡೆ ಗ್ಯಾಂಗ್ ಸದಸ್ಯನಾದ ಕುಪೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ದರೋಡೆಯ ಮಾಸ್ಟರ್ ಮೈಂಡ್ ಸ್ವತಃ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಕೃತ್ಯಕ್ಕೆ ಪೊಲೀಸ್ ಇಲಾಖೆಯ ವಾಹನ ಬಳಕೆ ಆಗಿದೆ ಅದನ್ನ ವಶಕ್ಕೆ ಪಡೆಯಲಾಗಿದ್ದು, ದೂರುದಾರರ ಹಿನ್ನಲೆಯನ್ನ ಸಹ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದು ಅವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post