ಮಂಗಳೂರು, ಜ.20 : ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ನಿಯಂತ್ರಣ ಹೇರಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ 5ಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟರೆ ಆ ಸಂಸ್ಥೆಯನ್ನು ಒಂದು ವಾರದ ಮಟ್ಟಿಗೆ ಮುಚ್ಚಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆದರೆ ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಇಸ್ಪೀಟ್ ದಂಧೆ ನಡೆಸುವವರು ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತೇ ನೀಡಿಲ್ಲ ಎನ್ನುವ ವಿಚಾರ ಹೊರಬಿದ್ದಿದೆ. ಮಂಗಳೂರು ನಗರದಲ್ಲಿ 18 ಕಡೆ ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಇಸ್ಪೀಟ್ ಜೂಜಾಟದ ದಂಧೆ ರಾಜ ರೋಷವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ.



ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಾರ್ವಜನಿಕ ಸಭೆ, ಸಮಾರಂಭ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದ್ದರಿಂದ ರಾತ್ರಿಯ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ. ರಾಜ್ಯ ಸರಕಾರದ ಆದೇಶ ಅನ್ವಯ ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್ ಬಂದ್ ಮಾಡುವಂತೆ ಜನವರಿ 12ರಂದು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶವನ್ನು ಕ್ಲಬ್ ಮಾಲೀಕರು ಪಾಲಿಸಿಲ್ಲ.

ಇಡೀ ಜಿಲ್ಲೆಯ ಕಾನೂನು, ಸುವ್ಯವಸ್ಥೆ, ಆಡಳಿತ ನೋಡಿಕೊಳ್ಳುವುದು ಜಿಲ್ಲಾಧಿಕಾರಿಯ ಹೊಣೆ. ಹಾಗಾಗಿ ಜಿಲ್ಲಾ ದಂಡಾಧಿಕಾರಿ, ಮ್ಯಾಜಿಸ್ಟ್ರೇಟ್ ಎನ್ನುವ ಹೆಗ್ಗಳಿಕೆ ಜಿಲ್ಲಾಧಿಕಾರಿಗೆ ಇದೆ. 5 ಮಕ್ಕಳಿಗೆ ಕೊರೊನಾ ಶೀತ ಬಂದರೆ ಶಾಲೆ ಬಂದ್ ಮಾಡೋರಿಗೆ, ಇಸ್ಪೀಟ್ ಕ್ಲಬ್ ದಂಧೆಕೋರರಿಗೆ ಕಡಿವಾಣ ಹಾಕಲು ಕಷ್ಟವಾದೀತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಾರದು.