ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ.
ಡಿ. ರೂಪಾ ಅವರ ಪತಿ, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿಪಿಆರ್)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
‘ಶಾಸಕ ಸಾ.ರಾ. ಮಹೇಶ್ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ’ ಎಂಬ ಸುದ್ದಿಯನ್ನು ಪ್ರಸ್ತಾಪಿಸಿದ್ದ ರೂಪಾ ಭಾನುವಾರ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು. ಅವರಿಗೆ ಸಂಬಂಧಿಸಿದ 20 ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಂಧೂರಿ, ‘ವೈಯಕ್ತಿಕ ಹಗೆ ಸಾಧಿಸುವುದಕ್ಕಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಗೆ ಒಳಗಾದರೆ ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ’ ಎಂದಿದ್ದರು.
ಅಧಿಕಾರಿಗಳ ಬೀದಿಜಗಳದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಶಿಸ್ತು ಉಲ್ಲಂಘನೆ, ದುರ್ನಡತೆ, ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಇಬ್ಬರಿಗೂ ನೋಟಿಸ್ ನೀಡಲಾಗಿದೆ.
ಮೌನೀಶ್ ಮೌದ್ಗಿಲ್ ಅವರ ವರ್ಗಾವಣೆಯಿಂದ ತೆರವಾದ ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಯ ಆಯುಕ್ತರ ಹುದ್ದೆಗೆ ಅಲ್ಲಿಯೇ ಹೆಚ್ಚುವರಿ ನಿದೇಶಕರಾಗಿದ್ದ ಸಿ.ಎನ್.ಸುಧೀಂದ್ರ ಅವರನ್ನು ನೇಮಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರ ಸ್ಥಾನಕ್ಕೆ ಬಸವರಾಜೇಂದ್ರ ಎಚ್ ಅವರನ್ನು ನೇಮಕ ಮಾಡಲಾಗಿದ್ದು, ಡಿ.ರೂಪಾ ಅವರ ಸ್ಥಾನಕ್ಕೆ ಭಾರತಿ.ಡಿ ಎಂಬುವವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Discover more from Coastal Times Kannada
Subscribe to get the latest posts sent to your email.








Discussion about this post