ಮಂಗಳೂರು : ಬೈಕಿಗೆ ಮೀನಿನ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಮಂಗಳೂರಿನ ಎಕ್ಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಅಬ್ದುಲ್ ರವೂಫ್ ಮೃತ ವ್ಯಕ್ತಿ. ಇವರು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿ ಅತಿ ವೇಗದ ಚಾಲನೆಯಿಂದ ಬೈಕಿಗೆ ಡಿಕ್ಕಿಯಾಗಿದೆ. ಬೈಕಿನ ಮಿರರ್ ಗೆ ತಾಗಿದ್ದರಿಂದ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆ ಮತ್ತು ದೇಹದ ಮೇಲಿನಿಂದಲೇ ಲಾರಿಯ ಚಕ್ರ ಹರಿದು ಹೋಗಿದೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಸ್ಥಳದಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಕನಾಡಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವು ಮಾಡಿದ್ದಾರೆ. ಎಕ್ಕೂರು ಇಂಡಿಯಾನ ಸಭಾಂಗಣ ಎದುರಲ್ಲೇ ಘಟನೆ ನಡೆದಿದೆ. ಸ್ಥಳದಲ್ಲಿ ನೆತ್ತರು ಕೋಡಿಯಂತೆ ಹರಿದಿದ್ದು ಜಾಗಕ್ಕೆ ಪೊಲೀಸರೇ ಮಣ್ಣು ಸುರಿದಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
Discussion about this post