ವಿಟ್ಲ: ಬೋಳಂತೂರು ನಾರ್ಶ ಎಂಬಲ್ಲಿ ಉದ್ಯಮಿಯೊಬ್ಬರ ಮನೆಗೆ 6 ಮಂದಿಯ ತಂಡವೊಂದು ಈಡಿ ಅಧಿಕಾರಿಗಳೆಂದು ನಂಬಿಸಿ, ಸುಮಾರು 30 ಲಕ್ಷ ರೂ. ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರಾಜ್ಯ ದರೋಡೆಕೋರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಕೊಲ್ಲಂ ನಿವಾಸಿ ಅನಿಲ್ ಫರ್ನಾಂಡಿಸ್ (49) ಎಂದು ಗುರುತಿಸಲಾಗಿದೆ. ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, 5 ಲಕ್ಷ ರೂ. ನಗದು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜ.3 ರಂದು ರಾತ್ರಿ, ಬಂಟ್ವಾಳ ತಾಲೂಕು, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ, ಉದ್ಯಮಿಯೊಬ್ಬರ ಮನೆಗೆ ಆರು ಜನ ಅಪರಿಚಿತರು ಇಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 02/2025 ರಂತೆ ಪ್ರಕರಣ ದಾಖಲಿಸಿಕೊಂಡು, ಮಾನ್ಯ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಅನಿಲ್ ಫರ್ನಾಂಡಿಸ್ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ ದರೋಡೆಗೆ ಬಳಸಿದ KL-02-BP-1104ನೇ ನೊಂದಣಿ ನಂಬ್ರದ ಎರ್ಟಿಗಾ ಕಾರು, 5,00,000/-ರೂ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517ನೇ ನಂಬರ ಪ್ಲೇಟ್‌ನ್ನು ವಶಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ- 11,00,000/- ರೂ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿ ಬಾಕಿ ಇರುತ್ತದೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿರುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post